ಪೊನ್ನಂಪೇಟೆ (ಕೊಡಗು) : ಮಾಟ-ಮಂತ್ರದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ನಕಲಿ ಮಾಂತ್ರಿಕನೋರ್ವನನ್ನು ಜನ ತರಾಟೆಗೆ ತೆಗೆದುಕೊಂಡಿರುವ ಘಟನೆ ಪೊನ್ನಂಪೇಟೆ ಸಮೀಪದ ಬಲ್ಯಮಂಡೂರಿನ ಬಳಿ ನಡೆದಿದೆ.
ಪೊನ್ನಂಪೇಟೆ ಸಮೀಪದ ಬಲ್ಯಮಂಡೂರಿನ ನಿವಾಸಿ ಮಡಿವಾರ ರವಿ ಎಂಬಾತ ಜನರಿಗೆ ಮಾಟ-ಮಂತ್ರದ ಹೆಸರಲ್ಲಿ ವಂಚಿಸುತ್ತಿದ್ದ. ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರ ಆರೋಗ್ಯ ಸರಿ ಮಾಡುತ್ತೇನೆ ಎಂದು ನಾಟಕವಾಡಿ ನಿಮಗೆ ಬೇರೆಯವರು ಮಾಟ ಮಾಡಿಸಿಟ್ಟಿದ್ದಾರೆ.
ಅದನ್ನು ನಾನು ತೆಗೆಯುತ್ತೇನೆ ಎಂದು ನಂಬಿಸಿದ್ದಾನೆ. ರಾತ್ರಿ ಗುಂಡಿ ತೆಗೆಯುತ್ತಿರುವಾಗಲೇ ಅದರೊಳಗೆ ಬಿದ್ದು ಒದ್ದಾಡಿದ ನಕಲಿ ಮಂತ್ರವಾದಿ, ಯಾರಿಗೂ ಗೊತ್ತಾಗದಂತೆ ತನ್ನ ಸೊಂಟದಿಂದ ಕುಡಿಕೆಯೊಂದನ್ನು ತೆಗೆದಿದ್ದಾನೆ. ಬಳಿಕ ಗುಂಡಿಗೆ ಕೋಳಿ ಕತ್ತರಿಸಿ ಹಾಕಿಸಿದ್ದಾನೆ.
ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಸ್ಥಳೀಯರು, ನಕಲಿ ಮಾಂತ್ರಿಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈತ ಪೊನ್ನಂಪೇಟೆ ಸುತ್ತಮುತ್ತ ಮಾಟ-ಮಂತ್ರದ ಹೆಸರಲ್ಲಿ ಮುಗ್ಧ ಜನರನ್ನು ಮೋಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.