ಕೊಡಗು: ಅವನು ಶಿಸ್ತಿನ ಸಿಪಾಯಿ, ಸಿಎಂನಿಂದ ಹಿಡಿದು ಪ್ರಧಾನಿವರೆಗೆ ಎಲ್ಲರ ಭದ್ರತೆಯ ಕರ್ತವ್ಯದಲ್ಲಿ ನಿರತನಾಗುತ್ತಿದ್ದವನು. ನಿನ್ನೆ ಕೂಡ ಕರ್ತವ್ಯ ನಿಮಿತ್ತ ಪರ ಊರಿಗೆ ಹೋಗಿದ್ದವನು, ಕರ್ತವ್ಯದ ನಡುವೆಯೇ ಬಾರದ ಲೋಕಕ್ಕೆ ಹೋಗಿದ್ದಾನೆ.
ಕೊಡಗಿನ ಪೊಲೀಸ್ ಇಲಾಖೆಯ ಬಾಂಬ್ ಪತ್ತೆ ದಳದಲ್ಲಿದ್ದ ರ‍್ಯಾಂಬೋ ಎನ್ನುವ ಸ್ಕ್ಯಾಡ್ ಡಾಗ್ ( ಶ್ವಾನ) ಕರ್ತವ್ಯದಲ್ಲಿರುವಾಗಲೇ ಉಸಿರು ನಿಲ್ಲಿಸಿದೆ. ರ‍್ಯಾಂಬೋ ಆರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿತ್ತು. 2013 ರ ಅಕ್ಟೋಬರ್ನಲ್ಲಿ ಹುಟ್ಟಿದ ಈ ಶ್ವಾನವನ್ನು 4 ತಿಂಗಳ ಮರಿ ಇರುವಾಗಲೇ ಪೊಲೀಸ್ ತರಬೇತಿಗೆ ಕರೆತರಲಾಗಿತ್ತು. ಮೊದಲು ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ಪಡೆದಿದ್ದ ಶ್ವಾನ, ಬಳಿಕ ಕೊಡಗಿನ ಬಾಂಬ್ ಪತ್ತೆ ದಳಕ್ಕೆ ಸೇರ್ಪಡೆಗೊಂಡಿತ್ತು. ಅಂದಿನಿಂದ ಅತ್ಯಂತ ಟಫ್ ಆಗಿದ್ದ ಈ ಶ್ವಾನ, ಅಷ್ಟೇ ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿತಂತೆ. ಹೀಗಾಗಿಯೇ ಇದಕ್ಕೆ ರ‍್ಯಾಂಬೋ ಎಂಬ ಹೆಸರಿಡಲಾಗಿತ್ತಂತೆ.
ಗೋ ಎಂದು ಸೂಚನೆ ಕೊಡುತ್ತಿದ್ದಂತೆ ಅಪರಾಧಿಗಳು ಎಲ್ಲೇ ಅಡಗಿದ್ದರೂ ಚಂಗನೆ ಹಾರಿ ಕಚ್ಚಿ ಹಿಡಿದೆಳೆದು ತರುತ್ತಿದ್ದ. ಕರ್ತವ್ಯಕ್ಕೆ ಸೇರಿದಂದಿನಿಂದ ಇದುವರೆಗೆ ಬರೋಬ್ಬರಿ 500 ಕ್ಕೂ ಹೆಚ್ಚು ಕಾರ್ಯಾಚರಣೆಗಳಲ್ಲಿ ರ‍್ಯಾಂಬೋ ಭಾಗವಹಿಸಿದ್ದ. ಇತ್ತೀಚೆಗೆ, ಉಗ್ರರು ದೇಶದೊಳಗೆ ನುಗ್ಗದಂತೆ ಹೇಗೆ ತಡೆಯುವ ಮಾಕ್ ಡ್ರಿಲ್ ತರಬೇತಿಗೆ ರ‍್ಯಾಂಬೋ ಸುರತ್ಕಲ್‌ಗೆ ಹೋಗಿದ್ದ. ನಿನ್ನೆ ಕರ್ತವ್ಯದಲ್ಲಿರುವಾಗ ರ‍್ಯಾಂಬೋಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ತಕ್ಷಣವೇ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಯಿತಾದರೂ, ಫಲಕಾರಿಯಾಗದೇ ರ‍್ಯಾಂಬೋ ಹೃದಯಾಘಾತದಿಂದ ಪ್ರಾಣಬಿಟ್ಟಿದ್ದಾನೆ.
ಇಂದು ಮಡಿಕೇರಿಯ ಪೊಲೀಸ್ ಮೈದಾನದಲ್ಲಿ ಎಸ್ಪಿ ಕ್ಷಮಾ ಮಿಶ್ರಾ ನೇತೃತ್ವದಲ್ಲಿ ರ‍್ಯಾಂಬೋಗೆ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಮೂರು ಸುತ್ತು ಕುಶಾಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪೊಲೀಸ್ ಮೈದಾನದ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಯಿತು.