ಕೊಡಗು: ಲಕ್ಷ್ಮಣ ತೀರ್ಥ ನದಿ ಅಂಚಿನ ಕೆರೆಯೊಂದರಲ್ಲಿ ಆಶ್ರಯ ಪಡೆದಿದ್ದ ಭಾರೀ ಗಾತ್ರದ ಮೊಸಳೆಯನ್ನು ಗ್ರಾಮಸ್ಥರು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಈ ಮೊಸಳೆಯು ಅಂದಾಜು 70 ಕೆಜಿ ತೂಕವಿದ್ದು, ಬೃಹತ್ ಗಾತ್ರವನ್ನು ಹೊಂದಿದೆ. ಗ್ರಾಮದ ಚಂಗಪ್ಪ ಎಂಬುವವರಿಗೆ ಸೇರಿದ ಕೆರೆಯಲ್ಲಿ ಮೊಸಳೆ ಆಶ್ರಯ ಪಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಅಷ್ಟೇ ಅಲ್ಲದೆ ಸಮೀಪದ ಭತ್ತದ ಗದ್ದೆಯ ಮಧ್ಯೆಯು ಸಹ ಓಡಾಡುತ್ತಿತ್ತು. ಮೊಸಳೆಯ ಚಲನವಲನಗಳನ್ನ ಗಮನಿಸಿದ ಗ್ರಾಮಸ್ಥರು ಕೊನೆಗೂ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ಮೊಸಳೆ ಬಾಯಿ ಭಾಗದಲ್ಲಿ ಗಾಯಗಳಾಗಿದ್ದು, ಪಶು ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಕಬಿನಿ ಜಲಾಶಯದ ಹಿನ್ನೀರಿಗೆ ಬಿಡಲಾಗಿದೆ.