ಕೊಡಗು: 2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಮಡಿಕೇರಿಯ ಇಂದಿರಾ ನಗರ, ಚಾಮುಂಡೇಶ್ವರಿ ನಗರ ಅಕ್ಷರಶಃ ನಲುಗಿಹೋಗಿತ್ತು. ರಣಭೀಕರ ಮಳೆಯಿಂದ ಅದೆಷ್ಟೋ ಮಂದಿ ಮನೆಕಳೆದುಕೊಂಡಿದ್ದರು. ಸಂತ್ರಸ್ತರಿಗೆ ಮಾದಪುರ ಸಮೀಪದ ಜಂಬೂರು, ಮಡಿಕೇರಿ ಸಮೀಪದ ಮದೆನಾಡಿನ ಕರ್ಣಗೇರಿಯಲ್ಲಿ ಮನೆಗಳನ್ನು ನೀಡಲಾಗಿತ್ತು. ಅದರೀಗ ಅವರೆಲ್ಲ ಮತ್ತದೇ ಅಪಾಯಕಾರಿ ಪ್ರದೇಶದಲ್ಲಿ ವಾಸವಾಗತೊಡಗಿದ್ದಾರೆ. ಇದಕ್ಕೆ ಕಾರಣ ಹೊಸದಾಗಿ ನೀಡಿದ ಮನೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ.
ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು ಅವುಗಳು ಕೂಡ ಅಪಾಯದಲ್ಲಿದೆ. ಮಳೆಗಾಲ ಆರಂಭವಾಗಲಿದ್ದು ನಗರಸಭೆ ಅಪಾಯಕಾರಿ ಮನೆಗಳಿಗೆ ನೋಟಿಸ್ ಕೊಡಲು ಮುಂದಾಗಲಿದ್ದಾರೆ. ಈ ಪರಿಸ್ಥಿತಿಯಲ್ಲಿ ನಾವು ಹೋಗೋದಾದ್ರೂ ಎಲ್ಲಿಗೆ? ಎಂದು ನಿರಾಶ್ರಿತರು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆಗಾಲದ ವೇಳೆ ಕ್ರಮ ಕೈಗೊಳ್ಳುವ ಬದಲು ಮೊದಲೇ ಸರ್ಕಾರ ಇಂತಹ ವಿಷಯಗಳಿಗೆ ಗಮನ ಹರಿಸಬೇಕೆಂದು ನಿರಾಶ್ರಿತೆ ಜುಲೆಕಾಬಿ ಹೇಳಿದರು.
ಕಳೆದ ಬಾರಿ ಕೊಡಗಿಗೆ ಕಂದಾಯ ಸಚಿವ ಆರ್.ಅಶೋಕ್ ಗುಡ್ಡಕುಸಿತವಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಆ ಸಂದರ್ಭ ಚಾಮುಂಡೇಶ್ವರಿ ನಗರದ ಕೆಲ ಪ್ರದೇಶಗಳನ್ನು ಅರಣ್ಯ ಪ್ರದೇಶವಾಗಿ ಪರಿವರ್ತಿಸುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದರು. ಇದೀಗ ಕೊಡಗು ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಕೊಡಗು ಜಿಲ್ಲೆಗೆ ಭೇಟಿ ನೀಡಿ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಇದನ್ನೂ ಓದಿ: ದುರಸ್ತಿಗಾಗಿ ಕಾದಿವೆ ದ.ಕನ್ನಡ ಜಿಲ್ಲೆಯ 62 ಸರ್ಕಾರಿ ಶಾಲೆಗಳು
ಅಪಾಯಕಾರಿ ಪ್ರದೇಶದಲ್ಲಿರುವ 70ಕ್ಕೂ ಹೆಚ್ಚಿನ ಕುಟುಂಬಗಳನ್ನು ಸ್ಥಳಾಂತರಿಸುವ ಕೆಲಸಕ್ಕೆ ಮುಂದಾಗುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದಾರೆ. ಮನೆಗಳನ್ನು ನೀಡಿದ್ದರೂ ಕೂಡ ಒಂದಷ್ಟು ಮಂದಿ ಹೊಸ ಮನೆಗಳನ್ನು ತೊರೆದು ಹಳೆ ಮನೆಗಳಲ್ಲಿ ವಾಸಿಸುತ್ತಿರುವ ವಿಚಾರ ಸಚಿವರ ಗಮನಕ್ಕೂ ಬಂದಿದ್ದು ಅವರ ವಿರುದ್ಧವೂ ಕೂಡ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಮಳೆಗಾಲ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿದ್ದು ಜಿಲ್ಲಾಡಳಿತ ಯಾವ ರೀತಿಯಲ್ಲಿ ಮುಂಜಾಗ್ರತೆ ವಹಿಸಲಿದೆಯೆಂದು ನೋಡಬೇಕಿದೆ.