ಕೊಡಗು: ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಜನೋತ್ಸವಕ್ಕೆ ಕರಗ ಪೂಜಿಸುವ ಮೂಲಕ ಚಾಲನೆ ದೊರೆತಿದೆ. ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ ಮಡಿಕೇರಿಯ ಪಂಪಿನ ಕೆರೆ ಬಳಿ ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸಿದರು.
ಚೌಟಿ ಮಾರಿಯಮ್ಮ, ದಂಡಿನಮಾರಿಯಮ್ಮ, ಕಂಚಿಕಾಮಾಕ್ಷಿ ಮತ್ತು ಕೋಟೆ ಮಾರಿಯಮ್ಮ ಶಕ್ತಿ ದೇವತೆಗಳ ಕರಗಗಳಿಗೂ ಸಚಿವ ಸೋಮಣ್ಣ ಮತ್ತು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಂದ ಮೆರವಣಿಗೆ ಹೊರಟ ನಾಲ್ಕು ಕರಗಗಳು ನಗರದ ಪ್ರಮುಖ ಬೀದಿಗಳಲ್ಲಿ ತೆರಳಿ ತಮ್ಮ ತಮ್ಮ ದೇವಾಲಯ ತಲುಪಿದವು.
ಆದರೆ ಕೊರೊನಾ ಇರುವುದರಿಂದ ಈಗಾಗಲೇ ಕರಗ ಉತ್ಸವದಲ್ಲಿ ಹೆಚ್ಚು ಜನರು ಸೇರುವಂತಿಲ್ಲ ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿರುವುದರಿಂದ ಕರಗ ಮೆರವಣಿಗೆಯಲ್ಲಿ ಹೆಚ್ಚಿನ ಜನರು ಇರಲಿಲ್ಲ. ಇನ್ನು ಜನರು ಕೂಡ ಮನೆಗಳನ್ನು ಬಿಟ್ಟು ಹೊರಬರಲಿಲ್ಲ. ಒಟ್ಟಿನಲ್ಲಿ ಮೈಸೂರು ದಸರಾದಂತೆ ಖ್ಯಾತಿ ಪಡೆಯುತ್ತಿದ್ದ ಮಡಿಕೇರಿ ದಸರಾ ಜನೋತ್ಸವಕ್ಕೆ ಕರಗ ಮೆರವಣಿಗೆ ಮೂಲಕ ಚಾಲನೆ ದೊರೆತಿದ್ದು, ಈ ಬಾರಿ ದಸರಾ ಕೂಡ ಅತ್ಯಂತ ಸರಳವಾಗಿ ನಡೆಯಲಿದೆ.