ಮಡಿಕೇರಿ : ಜಿಲ್ಲೆಯಲ್ಲಿ ಕಳೆದ ಒಂಬತ್ತು ದಿನಗಳಿಂದ ನಡೆದ ಸರಳ ದಸರಾಕ್ಕೆ ವೈಭವಪೂರ್ಣ ತೆರೆ ಬಿದ್ದಿದೆ. ಮಂಜಿನ ನಗರಿ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಶೋಭಾಯಾತ್ರೆ ಮೈನವಿರೇಳಿಸುವಂತಿತ್ತು. ದೇವತೆಗಳ ಲೀಲೆಗಳನ್ನು ಬಿಂಬಿಸೋ ಕಥಾ ಪ್ರಸಂಗಗಳ ಸಂಯೋಜನೆ ಎಲ್ಲರ ಗಮನ ಸೆಳೆಯಿತು.
ಹಗಲು ಮೈಸೂರು ದಸರಾದ ವೈಭವನೋಡು, ರಾತ್ರಿ ಮಂಜಿನ ನಗರಿ ಮಡಿಕೇರಿ ದಸರಾದ ಸೊಬಗು ನೋಡು ಎಂಬ ಮಾತಿನಂತೆ ಮಡಿಕೇರಿ ದಸರಾ ರಂಗೇರಿತ್ತು. ರಾತ್ರಿ 11 ಗಂಟೆಗೆ ಶುರುವಾದ ದಶಮಂಟಪಗಳ ಉತ್ಸವ ಬೆಳಗ್ಗೆ 5 ಗಂಟೆವರೆಗೂ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಮೆರವಣಿಗೆ ನೋಡಲು ಮುಗಿಬಿದ್ದಿದ್ದರು.
ಇನ್ನು, ರಾತ್ರಿಯಿಡಿ ಮಂಜಿನ ನಗರಿಯ ರಸ್ತೆಗಳಲ್ಲಿ ಜನ ಸಾಗರವೇ ಸೇರಿತ್ತು. ದಶಮಂಟಪಗಳ ಪ್ರದರ್ಶನ ನಗರದ ಬೀದಿ ಬೀದಿಗಳಲ್ಲಿ ಪ್ರದರ್ಶನಗೊಂಡಿತು. ಆಂಜನೇಯನ, ಆದಿ ಶಕ್ತಿಯಿಂದ ಶುಂಭ ನೀಶುಂಭರ ಸಂಹಾರ, ಗಣಪತಿಯಿಂದ ಗಜಾಸುರನ ವಧೆ, ಚಂಡ-ಮುಂಡರ ವಧೆ ಸೇರಿ ಹಲವು ಪುರಾಣ ಹಾಗೂ ಪೌರಾಣಿಕ ಕಥಾವಸ್ತುಗಳನ್ನು ನಿರೂಪಿಸಲಾಗಿತ್ತು.
ಕೊರೊನಾ ಹಿನ್ನೆಲೆ ಜನ ದಟ್ಟಣೆ ಕಡಿಮೆಯಾಗಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದರೂ ಜಿಲ್ಲೆಗೆ ಬಂದ ಸಾವಿರಾರು ಪ್ರವಾಸಿಗರು ಮಾಸ್ಕ್, ಸಾಮಾಜಿಕ ಅಂತರ ಮರೆತು ಎಂಜಾಯ್ ಮಾಡುತ್ತಿದ್ದರು. ಕೆಲ ಪ್ರಮುಖ ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಓಡಾಟ ನಡೆಸುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ರು.
ಕೊರೊನಾ ಹಿನ್ನೆಲೆ ಕಳೆದ ವರ್ಷ ದಸರಾ ಕೇವಲ ಸ್ತಬ್ಧ ಮಂಟಪಗಳಿಗೆ ಸೀಮಿತವಾಗಿತ್ತು. ಆದರೆ, ಈ ಬಾರಿ ಸರಳ ರೀತಿ ದಶಮಂಟಪಗಳ ಶೋಭಾಯತ್ರೆ ಎಲ್ಲರನ್ನು ಆಕರ್ಷಣೆಗೊಳಿಸಿತು.
ಇದನ್ನೂ ಓದಿ: ಮಂಗಳೂರು ದಸರೆಗೆ ಅದ್ಧೂರಿ ತೆರೆ... ಹುಲಿವೇಷಕ್ಕೆ ಜನತೆ ಫಿದಾ