ಮಡಿಕೇರಿ(ಕೊಡಗು): ಕೊರೊನಾ ತಡೆಗೆ ಲಾಕ್ಡೌನ್ ಆದ ಪರಿಣಾಮ ಛಾಯಾಗ್ರಾಹಕರ ಬದುಕು ಸಹ ಸಂಕಷ್ಟದಲ್ಲಿದೆ.
ವರ್ಷದ 6 ತಿಂಗಳು ಮದುವೆ, ನಾಮಕರಣ, ಪ್ರಿವೆಡ್ಡಿಂಗ್ ಹೀಗೆ ಹಲವಾರು ಸುಸಂದರ್ಭಗಳಲ್ಲಿ ಫೋಟೋ ಹಾಗೂ ವಿಡಿಯೋ ಮಾಡಿಕೊಂಡು ಜೀವನ ನಡೆಸುತ್ತಿದ್ದ ಹಲವು ಕುಟುಂಬಗಳ ಮೇಲೆ ಲಾಕ್ಡೌನ್ ಎಫೆಕ್ಟ್ ತಟ್ಟಿದ್ದು, ಇದಕ್ಕೆ ಮಂಜಿನ ನಗರಿ ಕೊಡಗು ಕೂಡಾ ಹೊರತಾಗಿಲ್ಲ. ಏಕಾಏಕಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದ್ದರಿಂದ ಮದುವೆ ಹಾಗೂ ಶುಭ ಸಮಾರಂಭಗಳೆಲ್ಲವೂ ರದ್ದಾಗಿವೆ. ಇದರಿಂದ ಯಾವುದೇ ಕಾರ್ಯಕ್ರಮಗಳಿಲ್ಲದ ಪರಿಣಾಮ ವ್ಯವಹಾರವೂ ಇಲ್ಲದೆ 300ಕ್ಕೂ ಹೆಚ್ಚು ಛಾಯಾಗ್ರಾಹಕರ ಕುಟುಂಬಗಳು ಪ್ರತಿನಿತ್ಯ ಪರದಾಡುವಂತಾಗಿದೆ.
ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಸ್ಟುಡಿಯೋ ಆರಂಭಿಸಿದ್ದವರ ಪಾಡಂತೂ ಹೇಳತೀರದ್ದಾಗಿದೆ. ಕೆಲವರು ಬದುಕಿನ ಬಂಡಿ ಎಳೆಯಲು ಬೇರೆ ದಾರಿ ಕಾಣದೆ ನಗರಗಳು ಹಾಗೂ ಹಳ್ಳಿ, ಹಳ್ಳಿಗಳಿಗೆ ಹೋಗಿ ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ಧಾರೆ. ತೀರಾ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕೆಂದು ಮನವಿ ಮಾಡಿದ್ದಾರೆ.