ಕೊಡಗು: ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲೂ ಅನರ್ಹ ಶಾಸಕರಿಗೆ ಸರಿಯಾದ ಪಾಠ ಕಲಿಸಬೇಕಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ಗುಡ್ಡೆಹೊಸೂರಿಗೆ ಖಾಸಗಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಗೆ ಶಕ್ತಿ ಇಲ್ಲದಂತಾಗಿದೆ. ಒಂದು ಪಕ್ಷದಿಂದ ಗೆದ್ದು ಬಳಿಕ ರಾಜೀನಾಮೆ ನೀಡಿ ಯಾವ ಪಕ್ಷಕ್ಕೆ ಬೇಕಾದ್ರೂ ಹೋಗಬಹುದು ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನರು ಅನರ್ಹ ಶಾಸಕರನ್ನು ಸೋಲಿಸಿ ಸರಿಯಾದ ಪಾಠ ಕಲಿಸಬೇಕು ಎಂದಿದ್ದಾರೆ.
ಇನ್ನು ಸಿಎಂ ಯಡಿಯೂರಪ್ಪ ಅವರು ನಮಗೆ ಯಾರ ಸಪೋರ್ಟ್ ಬೇಕಾಗಿಲ್ಲ, ಮೂರು ವರ್ಷ ಸಿಎಂ ಆಗಿರ್ತೇನೆ ಎಂದಿದ್ದಾರೆ. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಆಗ ಅವರು ನಮ್ಮ ಬಳಿಗೆ ಬರಲಿದ್ದಾರೆ. ಒಂದು ಜೆಡಿಎಸ್ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದ್ರೆ ಮತ್ತೆ ಮೈತ್ರಿನಾ ಎನ್ನೋ ಪ್ರಶ್ನೆಗೆ, ನೋಡೋಣ ಆ ಸಂದರ್ಭದಲ್ಲಿ ಮತ್ತೆ ಯೋಚಿಸುತ್ತೇವೆ ಎಂದರು.
ಈ ಚುನಾವಣೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಎಲ್ಲಾ ಹದಿನೈದು ಕ್ಷೇತ್ರಗಳಿಗೂ ಉತ್ತಮ ಅಭ್ಯರ್ಥಿಯನ್ನು ಹಾಕಿದ್ದೇವೆ ಎಂದ್ರು. ಹಿರಿಕೆರೆ ಸ್ವಾಮೀಜಿ ಸ್ಪರ್ಧಿಸಿದ್ದು, ಅಲ್ಲಿ ಅನರ್ಹರಿಗೆ ಸೋಲುವ ಭಯವಿದೆ. ಹೀಗಾಗಿ ಸ್ವಾಮೀಜಿಯವರಿಂದ ನಾಮಪತ್ರ ವಾಪಸ್ ತೆಗೆಸಲು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.