ಕೊಡಗು: ಯುವತಿಯನ್ನು ಹತ್ಯೆ ಮಾಡಿ ನಾಪತ್ತೆಯಾಗಿದ್ದ ಆರೋಪಿಯ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಕೊಡಗಿನಲ್ಲಿ ನಡೆದಿದೆ. ಯುವತಿ ಕೊಲೆ ಮಾಡಿದ ಬಳಿಕ ಆರೋಪಿಯು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಶಯ ವ್ಯಕ್ತಪಡಿಸಲಾಗಿದೆ.
ಮಾರಕಾಸ್ತ್ರಗಳಿಂದ ಯುವತಿಯ ಬರ್ಬರ ಹತ್ಯೆ: ಕಳೆದ ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬ ಯುವತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲ ಗ್ರಾಮದಲ್ಲಿ ನಡೆದಿತ್ತು. ಮನೆಯಲ್ಲಿದ್ದ ಯುವತಿಯನ್ನು ರಾತ್ರಿ ಹೊರಗೆ ಕರೆದು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಘಟನೆಯಲ್ಲಿ ಬುಟ್ಟಿಯಂಡ ಮಾದಪ್ಪ ಹಾಗೂ ಸುನಂದ ದಂಪತಿಯ ಪುತ್ರಿಯಾದ ಆರತಿ (24) ಸ್ಥಳದಲ್ಲೇ ಮೃತಪಟ್ಟಿದ್ದರು. ಕೊಲೆ ಮಾಡಿದ ಬಳಿಕ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದ.
ಘಟನೆ ಸಂಬಂಧ ಇಲ್ಲಿನ ಕಂದಂಗಳ ಗ್ರಾಮದ ತಮ್ಮಯ್ಯ ಎಂಬ ವ್ಯಕ್ತಿಯೇ ತಮ್ಮ ಮಗಳನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ ಆರೋಪಿ ತಮ್ಮ ಮಗಳಿಗೆ ಕಳೆದ ಕೆಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದರು. ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದರು.
ಯುವತಿ ಕೊಲೆಯಾದ ಸ್ಥಳದಲ್ಲಿ ಹೆಲ್ಮೆಟ್ ಪತ್ತೆ : ಆರತಿ ಕೊಲೆಯಾದ ಸ್ಥಳದಲ್ಲಿ ವ್ಯಕ್ತಿಯ ಹೆಲ್ಮೆಟ್ ಪತ್ತೆಯಾಗಿತ್ತು. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರಿಗೆ ಈ ಹೆಲ್ಮೆಟ್ ತಮ್ಮಯ್ಯ ಎಂಬ ವ್ಯಕ್ತಿಯದ್ದು ಎಂಬುದು ತಿಳಿದು ಬಂದಿದೆ. ಇದರ ಜೊತೆಗೆ ಘಟನೆ ನಡೆದ ಅನತಿ ದೂರದಲ್ಲಿ ಈತನ ಬೈಕ್, ಮೊಬೈಲ್ ಹಾಗೂ ಚಪ್ಪಲಿಯೂ ಪತ್ತೆಯಾಗಿತ್ತು.
ಇನ್ನು ಸ್ಥಳದಲ್ಲಿ ವಿಷದ ಬಾಟಲ್ ಪತ್ತೆಯಾದ ಹಿನ್ನೆಲೆ ಆರೋಪಿಯು ಯುವತಿಯನ್ನು ಕೊಲೆ ಮಾಡಿದ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ ಯುವತಿ ಕೊಲೆಯಾದ ಮನೆಯ ಪಕ್ಕದ ಕೆರೆಯಲ್ಲಿ ಅಗ್ನಿಶಾಮಕ ದಳ ಮತ್ತು ಪೋಲಿಸರು ಶೋಧ ಕಾರ್ಯ ನಡೆಸಿದ್ದರು. ಸದ್ಯ ಆರೋಪಿಯ ಮೃತದೇಹ ಮನೆಯ ಪಕ್ಕದ ಕೆರೆಯಲ್ಲಿ ಪತ್ತೆಯಾಗಿದೆ. ಯುವತಿಯನ್ನ ಹತ್ಯೆ ಮಾಡಿ ಬಳಿಕ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.
ಎರಡು ದಿನದ ಬಳಿಕ ಆರೋಪಿ ಶವ ಪತ್ತೆ : ಯುವತಿಯನ್ನು ಹತ್ಯೆ ಮಾಡಿ ತಿಮ್ಮಯ್ಯ ನಾಪತ್ತೆಯಾಗಿದ್ದ ಎಂದು ಸಂಶಯಿಸಲಾಗಿತ್ತು. ಸದ್ಯ ಆರೋಪಿಯ ಮೃತದೇಹ ಎರಡು ದಿನಗಳ ಬಳಿಕ ಕೆರೆಯಲ್ಲಿ ಪತ್ತೆಯಾಗಿದೆ. ಯುವತಿಯನ್ನು ಹತ್ಯೆ ಮಾಡಿ ಬಳಿಕ ಆರೋಪಿಯು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ನಡೆದ ಮನೆ ಪಕ್ಕದ ಕೆರೆಯಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಎರಡು ದಿನಗಳ ಕಾಲ ಕೆರೆಯಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಪೊಲೀಸರು ಹುಡುಕಾಟ ನಡೆಸಿದ್ದರು. ಆದರೂ ಶವ ಪತ್ತೆಯಾಗದ ಹಿನ್ನೆಲೆ ಕೆರೆಯ ನೀರನ್ನು ಖಾಲಿ ಮಾಡಿದ್ದಾರೆ. ಈ ವೇಳೆ ಕೆರೆಯಲ್ಲಿ ತಿಮ್ಮಯ್ಯ ಶವ ಪತ್ತೆಯಾಗಿದೆ.ಇನ್ನು ಯುವತಿಯ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ : ಕೊಡಗು: ಅಪರಿಚಿತನಿಂದ ಯುವತಿಯ ಬರ್ಬರ ಹತ್ಯೆ