ಮಡಿಕೇರಿ(ಕೊಡಗು): ಬರಿಗಣ್ಣಿಗೆ ಕಾಣದ ಕೊರೊನಾ ವೈರಸ್ ಇಡೀ ಜಗತನ್ನೇ ನಡುಗಿಸುತ್ತಿದೆ. ಇದರ ಪರಿಣಾಮ ಸಾವಿರಾರು ಕಂಪನಿಗಳು ಬಾಗಿಲು ಹಾಕಿದ್ದರೆ, ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ನಗರ ಪ್ರದೇಶಗಳಿಂದ ಗ್ರಾಮಗಳತ್ತ ಮುಖಮಾಡಿದ್ದಾರೆ.
ಹೌದು, ನಗರಗಳಲ್ಲಿ ದುಡಿಯುತ್ತಿದ್ದ ಲಕ್ಷಾಂತರ ಯುವಕರು ಜೀವ ಉಳಿದರೆ ಸಾಕು ಅಂತಾ ಮತ್ತೆ ಹಳ್ಳಿಗಳಿಗೆ ಬಂದಿದ್ದಾರೆ. ಆದರೆ, ಹೀಗೆ ಗ್ರಾಮಗಳತ್ತ ಬಂದವರು ಸಮಯ ಹಾಳು ಮಾಡದೆ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಹೆಚ್ಚು ಮಳೆ ಸುರಿಯೋ ಕೊಡಗು ಜಿಲ್ಲೆಯನ್ನು ಬಿಟ್ಟು ಸಾವಿರಾರು ಯುವಕರು ಮಡಿಕೇರಿಗೋ ಅಥವಾ ದೂರದ ಬೆಂಗಳೂರಿಗೊ ಇಲ್ಲವೇ ಹೊರ ರಾಜ್ಯ, ದೇಶಗಳಿಗೋ ಹೋಗಿ ದುಡಿಯುತ್ತಿದ್ದರು. ಹೀಗಾಗಿ ಒಂದು ಕಾಲಕ್ಕೆ ಭತ್ತದ ಕಣಜ ಅಂತ ಹೆಸರು ಪಡೆದಿದ್ದ ಕೊಡಗಿನ ಬಹುತೇಕ ಗದ್ದೆಗಳು ಪಾಳು ಬಿದ್ದಿದ್ದವು. ಆದರೀಗ ಕೊರೊನಾ ಕಾಟ ತಡೆಯಲಾರದೆ ತಮ್ಮ ಹಳ್ಳಿಯೇ ಸುರಕ್ಷಿತ ಅಂತಾ ಯುವಕರು ಇಲ್ಲಿಗೆ ಬಂದಿದ್ದಾರೆ. ಹೀಗೆ ಬಂದವರು ಪಾಳುಬಿದ್ದಿದ್ದ ತಮ್ಮ ಗದ್ದೆಗಳಲ್ಲಿ ಮತ್ತು ಅಕ್ಕ ಪಕ್ಕದವರ ಗದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ನಡುಬಗ್ಗಿಸಿ ದುಡಿಯಲು ಶುರುಮಾಡಿದ್ದಾರೆ. ಅಷ್ಟೇ ಅಲ್ಲ, ಎಲ್ಲೋ ಹೋಗಿ ಮಾರಣಾಂತಿಕ ಕಾಯಿಲೆಗಳ ನಡುವೆಯೂ ದುಡಿಯುವುದಕ್ಕಾಗಿ ಒದ್ದಾಡುವುದಕ್ಕಿಂತ ಗದ್ದೆಯಲ್ಲಿ ದುಡಿಯುವುದರಲ್ಲಿ ನೆಮ್ಮದಿ ಇದೆ ಎನ್ನುತ್ತಿದ್ದಾರೆ.
ಇನ್ನು ಕೊರೊನಾ ವೈರಸ್ ಹಳ್ಳಿಗಳಿಗೂ ಹಬ್ಬುತ್ತಿರುವುದರಿಂದ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ಸಿಕ್ಕರೂ ಅವರ ಆರೋಗ್ಯ ಹೇಗಿದೆಯೊ ಏನೋ ಎಂಬ ಆತಂಕವೂ ನಮಗಿದೆ. ಜೊತೆಗೆ ಕಾರ್ಮಿಕರ ಬಳಕೆಯಿಂದ ಕೃಷಿ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ನಷ್ಟವಾಗುವ ಆತಂಕವೂ ಇರುತ್ತದೆ. ಈ ಎಲ್ಲಾ ಕಾರಣಗಳಿಂದ ಡ್ರಮ್ ಸೀಡ್ ಬಿತ್ತನೆ ವಿಧಾನಕ್ಕೆ ಯುವಕರು ಮೊರೆ ಹೋಗಿದ್ದಾರೆ. ಅದಕ್ಕಾಗಿ ಹಿರಿಯರ ಸಲಹೆ ಪಡೆಯುತ್ತಿರುವ ಯುವಕರು ಉತ್ತಮ ಬೆಳೆ ಬಂದು ಅಧಿಕ ಉತ್ಪಾದನೆ ಸಿಗುವ ಸಾಧ್ಯತೆ ಇದೆ ಎನ್ನುವ ಆಶಾ ಭಾವನೆ ಹೊಂದಿದ್ದಾರೆ. ಇದು ಊರಿನ ಹಿರಿಕರಿಗೂ ಸಂತಸ ತಂದಿದೆ.
ಒಟ್ಟಿನಲ್ಲಿ ಕೊರೊನಾ ಮಹಾಮಾರಿಗೆ ಹೆದರಿ ತಾವು ಉಳಿದುಕೊಂಡರೆ ಸಾಕು ಎಂದು ಹಳ್ಳಿಗಳತ್ತ ಮುಖ ಮಾಡಿದ್ದ ಯುವ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರೋದು ನಿಜಕ್ಕೂ ಒಳ್ಳೆಯ ಬೆಳವಣಿಗೆ.