ಮಡಿಕೇರಿ: ಕೊಡಗು ಜಿಲ್ಲೆಯ ಶುಂಠಿಕೊಪ್ಪ ವ್ಯಾಪ್ತಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಜನ ಕಂಗಾಲಾಗಿದ್ದಾರೆ.
ಕಳೆದ ರಾತ್ರಿ ಶುಂಠಿಕೊಪ್ಪದ ಅನಾಥ ಆಶ್ರಮಕ್ಕೆ ಸೇರಿದ ವಾಹನಕ್ಕೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದು ಬೆಳಗ್ಗೆ ಮಾಲೀಕ ವಾಹನ ಬಳಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿಕಾಸ್ ಜನಸೇವಾ ಟ್ರಸ್ಟ್, ಅನಾಥರಿಗೆ, ಭಿಕ್ಷುಕರಿಗೆ, ವಿಕಲಚೇತನ ಮಕ್ಕಳಿಗೆ ಆಸರೆ ನೀಡುವ ಸಲುವಾಗಿ ರಮೇಶ್ ಎಂಬುವರು ಆಶ್ರಮ ಕಟ್ಟಿದ್ದಾರೆ. ಈ ಮೂಲಕ ಕಷ್ಟದಲ್ಲಿ ಇರುವರನ್ನು ಕರೆತರಲು ತಮ್ಮ ಸ್ವಂತ ಖರ್ಚಿನಲ್ಲಿ ಮಾರುತಿ ವ್ಯಾನ್ ಖರೀದಿಸಿದ್ದರು. ಆದರೆ ಕಿಡಿಗೇಡಿಗಳು ಕೃತ್ಯಕ್ಕೆ ವ್ಯಾನ್ ಹಾಳಾಗಿದೆ.
ಆಶ್ರಮದ ಮುಂದೆ ನಿಲ್ಲಿಸಿದ ವಾಹನದ ಕೆಳ ಬಾಗ ಮತ್ತು ಹಿಂದಿನ ಕಿಟಕಿ ಭಾಗದಲ್ಲಿ ಬೆಂಕಿ ಹಚ್ಚಲಾಗಿದೆ. ಅದೃಷ್ಟವಶಾತ್ ವ್ಯಾನಿನಲ್ಲಿ ಸಾಕಷ್ಟು ಪೆಟ್ರೋಲ್ ಇಲ್ಲದಿದ್ದ ಕಾರಣ ಅನಾಹುತ ತಪ್ಪಿದೆ. ಇದೇ ರೀತಿ ಕೆಲವು ತಿಂಗಳುಗಳ ಹಿಂದೆ ಬೈಕಿನಲ್ಲಿ ತಡರಾತ್ರಿ ಬರುವ ಕೆಲವು ಪುಂಡರು ಆಟೋಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು ಎನ್ನಲಾಗುತ್ತಿದೆ.
ಕಾರುಗಳ ಚಕ್ರ ಕದಿಯುವಂತಹ ಪ್ರಕರಣ ದಾಖಲಾಗಿದ್ದರೂ ಶುಂಠಿಕೂಪ್ಪ ಪೊಲೀಸರು ಆರೋಪಿಗಳ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಗಾಂಜಾ ಮಾರಾಟ, ವೈಟ್ನರ್ ಸೇವನೆ , ಮದ್ಯಪಾನ ದಂತಹ ಚಟುವಟಿಕೆಗಳು ಸಾಕಷ್ಟು ನಡೆಯುತ್ತಿವೆಯಂತೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಇಲ್ಲಿನ ಜನರ ಆರೋಪವಾಗಿದೆ.