ಕೊಡಗು: ಜೂನ್, ಜುಲೈ ತಿಂಗಳಲ್ಲಿ ಕರ್ನಾಟಕದ ಕಾಶ್ಮೀರ ಪ್ರವಾಸಿಗರಿಂದ ತುಂಬಿ ತುಳುಕುತಿತ್ತು. ಆದರೆ ಲಾಕ್‌ಡೌನ್ ಸಡಿಲಿಕೆ ಮಾಡಿದರೆ ಸಾಕು ಎನ್ನುತ್ತಿದ್ದ ವ್ಯಾಪಾರಿಗಳು ಗ್ರಾಹಕರಿಲ್ಲದೆ ಪರದಾಡುತ್ತಿದ್ದಾರೆ.
ಆದರೆ ಪ್ರವಾಸಿಗರಿಲ್ಲದೇ ಇರುವುದರಿಂದ ಇದೀಗ ಅಂಗಡಿಗಳು ಗ್ರಾಹಕರಿಲ್ಲದೆ ಬಣಗುಡುತ್ತಿವೆ. ಅಷ್ಟೇ ಅಲ್ಲ ಮಂಜಿನ ನಗರಿ ಮಡಿಕೇರಿಯಲ್ಲೇ ವಾರದ ಕೊನೆ ದಿನಗಳಲ್ಲೂ ಜನರು, ವಾಹನಗಳ ಓಡಾಟವಿಲ್ಲದೆ ರಸ್ತೆಗಳು ಖಾಲಿ ಹೊಡೆಯುತ್ತಿವೆ.
ಲಾಕ್ ಡೌನ್ ಸಡಿಲವಾದರೆ ಸಾಕು ಪ್ರವಾಸಿಗರು ಕೊಡಗಿನತ್ತ ಮುಖ ಮಾಡುತ್ತಾರೆ. ಎಂದಿನಂತೆ ವ್ಯಾಪಾರ ವಹಿವಾಟು ನಡೆಸಬಹುದು ಎಂದುಕೊಂಡಿದ್ದ ಕೊಡಗಿನ ವ್ಯಾಪಾರಸ್ಥರಿಗೆ ತೀವ್ರ ನಿರಾಸೆ ಮೂಡಿಸಿದೆ. ಮತ್ತೊಂದೆಡೆ ಇಂದಿಗೂ ಕೊಡಗಿನ ಪ್ರವಾಸಿ ತಾಣಗಳು ಬಂದ್ ಆಗಿದ್ದು, ನೋಡುಗರಿಗೆ ಮುಕ್ತವಾಗಿಲ್ಲ. ಹೀಗಾಗಿ ಪ್ರವಾಸೋದ್ಯಮವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಕುಟುಂಬಗಳು ಕಂಗಾಲಾಗಿವೆ ಎನ್ನೋದು ವ್ಯಾಪಾರಸ್ಥರ ಅಳಲು.