ಕೊಡಗು : ಜಿಲ್ಲೆಯಲ್ಲಿ 44 ಕಡೆ ಭೂಕುಸಿತ ಹಾಗೂ 43 ಕಡೆಯಲ್ಲಿ ಜಲಪ್ರವಾಹದ ಸ್ಥಳಗಳನ್ನು ಜಿಲ್ಲಾಡಳಿತ ಗುರುತು ಮಾಡಿದೆ. ಹೀಗಾಗಿ, ಕೊಡಗಿನ ಜನತೆ ಆತಂಕದಲ್ಲಿಯೇ ಜೀವನ ಕಳೆಯುವಂತಾಗಿದೆ. ಜಿಲ್ಲೆಯ 5 ತಾಲೂಕುಗಳ 10 ಹೋಬಳಿಯ 100 ಕಡೆಯಲ್ಲಿ ಜಲಕಂಟಕ ಎದುರಾಗುವ ಸೂಚನೆ ನೀಡಿದೆ.
2018-19ರಲ್ಲಿ ಭೀಕರ ಜಲ ಪ್ರವಾಹ ಉಂಟಾಗಿ ಬೆಟ್ಟ, ರಸ್ತೆಗಳು ಕುಸಿದು ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡ ಜನ ನಿರಾಶ್ರಿತರ ಕೇಂದ್ರದಲ್ಲಿ ವಾಸಮಾಡಿದ್ದರು. ಆ ಭೀತಿ ಜನರಲ್ಲಿ ಮಾಸುವ ಮುನ್ನವೇ ಜಿಲ್ಲಾಡಳಿತ ಮತ್ತೆ ಪ್ರಕೃತಿ ವಿಕೋಪದ ಮುನ್ಸೂಚನೆ ನೀಡಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.
ಪೂರ್ವ ಮುಂಗಾರಿನಲ್ಲಿಯೇ ಹೆಚ್ಚು ಮಳೆ ಸುರಿದಿದ್ದು, ಒಂದು ರೀತಿಯ ಭಯ ಸೃಷ್ಟಿಯಾಗಿದೆ. ಇನ್ನು ಕೆಲವು ದಿನಗಳಲ್ಲಿ ಮುಂಗಾರು ಜಿಲ್ಲೆಗೆ ಪ್ರವೇಶಿಸಲಿದ್ದು, ಜಿಲ್ಲೆಗೆ ಅಪಾಯ ತಂದೊಡ್ಡುತ್ತಾ ಎನ್ನುವ ಭೀತಿಯಲ್ಲಿದ್ದಾರೆ. ಮಳೆಗಾಲದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಪಂಚಾಯತ್ ಮಟ್ಟದ ಅಧಿಕಾರಿಗಳಿಂದ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಫುಲ್ ಅಲರ್ಟ್ ಆಗಿರುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಸೂಚನೆ ನೀಡಿದ್ದಾರೆ.
ಜಿಲ್ಲೆಯ 44 ಗ್ರಾಮಗಳಲ್ಲಿ ಪ್ರವಾಹವಾಗುವ ಸಾಧ್ಯತೆ ಇದೆ. 43 ಗ್ರಾಮಗಳಲ್ಲಿ ಭೂಕುಸಿತ ಆತಂಕವಿದೆ. ಅಂತಹ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದೆ. ಆ ಗ್ರಾಮಗಳ ಜನರಿಗೆ ಮಳೆಗಾಲ ಆರಂಭವಾಗುವಷ್ಟರಲ್ಲಿ ನೋಟಿಸ್ ನೀಡಲಾಗುವುದು. ಕಳೆದ ವರ್ಷಗಳಂತೆ ಕಾಳಜಿ ಕೇಂದ್ರಗಳನ್ನು ತೆರೆದು ಅಲ್ಲಿ ರಕ್ಷಣೆ ನೀಡಲಾಗುವುದು.
ಅಲ್ಲದೇ, ಜಿಲ್ಲೆಗೆ ಮುಂದಿನ ವಾರದಲ್ಲಿ ಎನ್ಡಿಆರ್ಎಫ್ ತಂಡ, ಸ್ಥಳೀಯ ಅಗ್ನಿ ಶಾಮಕ ದಳ, ಸ್ಥಳೀಯರು, ಪೊಲೀಸ್ ಇಲಾಖೆ ಎಲ್ಲರನ್ನು ಸೇರಿಸಿ ತಂಡ ರಚಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾಡಳಿತ ಪ್ರವಾಹ ಮತ್ತು ಭೂಕುಸಿತದ ಸಾಧ್ಯತೆ ಇರುವ ಗ್ರಾಮಗಳ ಜನರನ್ನು ಸ್ಥಳಾಂತರ ಮಾಡುವುದಕ್ಕೆ ಚಿಂತಿಸುತ್ತಿದೆ. ಆದರೆ, ಕಳೆದ ನಾಲ್ಕು ವರ್ಷಗಳ ಹಿಂದೆ ಭೂಕುಸಿತ ಮತ್ತು ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿದ್ದ ನೂರಾರು ಸಂತ್ರಸ್ತರಿಗೆ ಇಂದಿಗೂ ಮನೆ, ಪರಿಹಾರ ಕೊಟ್ಟಿಲ್ಲ. 2018ರಲ್ಲಿ ಮನೆ ಕಳೆದುಕೊಂಡಿದ್ದ ಕುಟುಂಬಗಳ ಪೈಕಿ 70ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆ ವಿತರಣೆ ಮಾಡಿಲ್ಲ.
ಕೆ.ನಿಡುಗಣೆ ಪಂಚಾಯತ್‌ನ ಆರ್ಟಿಒ ಕಚೇರಿ ಬಳಿ ಇಂದಿಗೂ ಮನೆ ಕಾಮಗಾರಿ ಮುಂದುವರಿದಿದೆ. ಮತ್ತೊಂದೆಡೆ ನೆಲ್ಯಹುದಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ 80ಕ್ಕೂ ಹೆಚ್ಚು ಸಂತ್ರಸ್ತರ ಕುಟುಂಬಗಳಿಗೆ ಅಭ್ಯತ್ ಮಂಗಲ ಬಳಿ ನಿವೇಶನ ಗುರುತಿಸಿ ಎರಡು ವರ್ಷಗಳಾದರೂ ಇಂದಿಗೂ ಹಂಚಿಕೆ ಮಾಡಿಲ್ಲ. ಕೆಲವು ಭಾಗದಲ್ಲಿ ಮಾತ್ರ ಹಂಚಿಕೆಯಾಗಿದೆ. ಈಗ ಮತ್ತೆ ಮಳೆಗಾಲ ಆರಂಭವಾಗಿದೆ. ಕೆಲವು ಕಡೆ ಮನೆ ಖಾಲಿ ಮಾಡಿ ಅಂದ್ರೆ ನಾವು ಎಲ್ಲಿ ವಾಸಮಾಡುವುದು?, ಎಲ್ಲಿಗೆ ಹೋಗುವುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸರ್ಕಾರ ಕೊಟ್ಟ ಮನೆ ತೊರೆದು ಅಪಾಯಕಾರಿ ಮನೆಗಳಿಗೆ ತೆರಳುತ್ತಿರುವ ಕೊಡಗು ಜನತೆ!