ಮಡಿಕೇರಿ(ಕೊಡಗು): ಪ್ರವಾಸಿಗರ ಆಕರ್ಷಣೀಯ ತಾಣವಾದ ಕೊಡಗಿನ ದುಬಾರೆಗೆ ತೆರಳುವ ರಾಜ್ಯ ಹೆದ್ದಾರಿ 91 ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಇದರ ಸಲುವಾಗಿ ಊರಿನ ಜನತೆ ಮತ್ತು ಜನಪ್ರತಿನಿಧಿಗಳು ಹೆದ್ದಾರಿ ದುರಸ್ತಿಗೆ ಸಂಬಧಿಸಿದಂತೆ ಇತ್ತೀಚೆಗೆ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆ ದುಬಾರೆ ಜೊತೆ ಹಲವಾರು ಗ್ರಾಮಗಳಿಗೆ ತೆರಳುವ ಸಂಪರ್ಕ ಮಾರ್ಗವಾಗಿದ್ದು, ಇದೀಗ ರಸ್ತೆಯು ಸಂಪೂರ್ಣ ಹಾಳಾಗಿದೆ. ಹೀಗಾಗಿ ಈ ರಸ್ತೆಯಲ್ಲಿ ಪ್ರವಾಸಿಗರು ಸೇರಿದಂತೆ ಗ್ರಾಮಸ್ಥರು ಬಿದ್ದು ಗಾಯಗೊಂಡಿದ್ದಾರೆ. ಸಂಚಾರಕ್ಕೆ ಯೋಗ್ಯವಲ್ಲದಷ್ಟು ರಸ್ತೆ ದುಸ್ಥಿತಿಗೆ ತಲುಪಿದೆ.
ಗುಡ್ಡೆಹೊಸೂರು-ಸಿದ್ದಾಪುರ ಮಾರ್ಗ ಮಧ್ಯೆ ರಸುಲ್ ಪುರದ ಬಸವೇಶ್ವರ ದೇವಾಲಯ ಬಳಿಯಿಂದ ದುಬಾರೆ ತನಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಮಾರ್ಗದುದ್ದಕ್ಕೂ ಬೃಹತ್ ಹೊಂಡಗಳು ನಿರ್ಮಾಣಗೊಂಡಿವೆ. ಹೀಗಾಗಿ ಜನರು ರಾಜ್ಯ ಹೆದ್ದಾರಿ ದುರಸ್ತಿಗೆ ಒತ್ತಾಯಿಸಿದ್ದಾರೆ. ಈ ಮಾರ್ಗದಲ್ಲಿ 3 ಕಿ.ಮೀ. ಉದ್ದದ ರಸ್ತೆಯನ್ನು ರೂಪಾಯಿ 4 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿ ಪಡಿಸಲು ಕಾಮಗಾರಿ ಆರಂಭಿಸಲಾಗಿತ್ತು. ನಾಲ್ಕು ಕಡೆಗಳಲ್ಲಿ ಕಲ್ವರ್ಟ್ ನಿರ್ಮಿಸಿದ ಬಳಿಕ ಕಾಮಗಾರಿ ಸ್ಥಗಿತಗೊಂಡು ತಿಂಗಳುಗಳೇ ಕಳೆದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಧಿಕ್ಕಾರ: ಈ ನಡುವೆ ಕಾಮಗಾರಿ ಗುತ್ತಿಗೆ ಪಡೆದವರು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ವಾಹನ ಸಂಚಾರದಿಂದ ರಸ್ತೆ ಸಂಪೂರ್ಣ ಧೂಳುಮಯವಾಗಿದೆ. ಇದರಿಂದ ಪ್ರಯಾಣಿಕರು, ಪಾದಚಾರಿಗಳು, ರಸ್ತೆ ಬದಿ ನಿವಾಸಿಗಳಿಗೆ ತೀವ್ರ ಅನಾನುಕೂಲ ಉಂಟಾಗಿದೆ ಎಂದು ಹೇಳಿದ್ದಾರೆ. ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್. ವಿಶ್ವ ನೇತೃತ್ವದಲ್ಲಿ ಹೊಸಪಟ್ಟಣದ ಮುತ್ತಪ್ಪ ದೇವಾಲಯ ಬಳಿ ರಸ್ತೆ ತಡೆ ನಡೆಸಿ, ಕೂಡಲೇ ಗುಂಡಿ ಮುಚ್ಚವ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿದರು. ಅಲ್ಲದೆ, ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗೂವ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಹರೀಶ್, ಈ ಮಾರ್ಗ ಸಂಪೂರ್ಣ ದುಸ್ಥಿತಿಯಿಂದ ಕೂಡಿರುವ ಕಾರಣ ಪ್ರಯಾಣಿಕರಿಗೆ ಸಂಚಕಾರ ಎದುರಾಗಿದೆ. ಹಲವು ಮಂದಿ ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ವಿದ್ಯಾರ್ಥಿಗಳು ರಸ್ತೆಯಲ್ಲಿ ಸಾಗಲು ಸಾಧ್ಯವಾಗದ ಪರಿಸ್ಥಿತಿಯಿದೆ. ರಸ್ತೆ ನಿರ್ವಹಣೆ ಹೊಣೆ ಹೊತ್ತವರು ಸಂಪೂರ್ಣ ನಿರ್ಲಕ್ಷ್ಯವಹಿಸಿದ ಕಾರಣ ರಸ್ತೆ ಧೂಳುಮಯವಾಗಿದೆ. ಸದ್ಯದಲ್ಲೇ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಶಾಸಕರು ಮಾತು ನೀಡಿದ್ದರು. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿದೆ. 15 ದಿನಗಳ ಒಳಗೆ ಪರಿಹಾರ ಲಭಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ; ಮಂಗಳೂರು ಬಾಂಬ್ ಸ್ಫೋಟ ಪ್ರಕರಣ: ಹುಬ್ಬಳ್ಳಿ ಯುವಕನ ಮನೆಯಲ್ಲಿ ಶೋಧ.. ಆರೋಪ ಅಲ್ಲಗಳೆದ ಪೋಷಕರು