ಮಡಿಕೇರಿ: ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವವು ಅಕ್ಟೋಬರ್ 17ರಂದು ಜರುಗುವ ಹಿನ್ನೆಲೆ, ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ಅಗತ್ಯ ಸಿದ್ಧತೆಗೆ ಡಿಸಿ ಸೂಚನೆ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೋವಿಡ್ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ವೈದ್ಯರು, ಶುಶ್ರೂಷಕರು, ಆ್ಯಂಬುಲೆನ್ಸ್ ಹೀಗೆ ಅಗತ್ಯ ತಂಡವನ್ನು ನಿಯೋಜಿಸುವಂತೆ ಹೇಳಿದರು.
ಭಾಗಮಂಡಲ ಗ್ರಾ.ಪಂ.ವತಿಯಿಂದ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಸ್ವಚ್ಛತೆಗೆ ಒತ್ತು ನೀಡುವುದು, ಕುಡಿಯುವ ನೀರು ಪೂರೈಕೆ, ಶೌಚಾಲಯ, ವಾಹನ ನಿಲುಗಡೆ ನಿರ್ವಹಣೆಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಲೋಕೋಪಯೋಗಿ ಇಲಾಖೆಯಿಂದ ಮಡಿಕೇರಿಯಿಂದ ತಲಕಾವೇರಿಯವರೆಗೆ ರಸ್ತೆಗಳ ಗುಂಡಿ ಮುಚ್ಚುವುದು, ರಸ್ತೆ ಬದಿ ಗಿಡಗಳನ್ನು ಕಡಿಯುವುದು ಹೀಗೆ ಮತ್ತಿತರೇ ಕ್ರಮ ವಹಿಸುವಂತೆ ಹೇಳಿದರು.
ನೀರಾವರಿ ಇಲಾಖೆ ವ್ಯಾಪ್ತಿಯ ಭಾಗಮಂಡಲ ರಸ್ತೆ ಸರಿಪಡಿಸುವುದು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡುವುದು, ತುಲಾ ಸಂಕ್ರಮಣ ದಿನದಂದು ಅಗತ್ಯ ಬಸ್‍ಗಳ ನಿಯೋಜನೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಸಾರ್ವಜನಿಕರ ಪ್ರವೇಶ ಸಂಬಂಧ ಸಭೆ:
ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಸಾರ್ವಜನಿಕರ ಪ್ರವೇಶ ಸಂಬಂಧ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ತುಲಾ ಸಂಕ್ರಮಣಕ್ಕೆ ಪೊಲೀಸ್ ಇಲಾಖೆಯಿಂದ ಪೊಲೀಸರು ಮತ್ತು ಹೋಂ ಗಾರ್ಡ್‍ಗಳ ನಿಯೋಜನೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಪವಿತ್ರ ತೀರ್ಥೋದ್ಭವ ಸಂಬಂಧ ವಿವಿಧ ಇಲಾಖೆಗಳು ಕಳೆದ ಬಾರಿಯಂತೆ ಅಗತ್ಯ ತಯಾರಿ ಮಾಡಿಕೊಳ್ಳಬೇಕು. ಜಿಲ್ಲಾಡಳಿತದ ಜೊತೆ ಕೈಜೋಡಿಸುವಂತೆ ತಿಳಿಸಿದರು.
ಇದನ್ನೂ ಓದಿ: ನೆಟ್‌ವರ್ಕ್ ಸಮಸ್ಯೆ ಕುರಿತು ಪ್ರಧಾನಿಗೆ ಪತ್ರ: ಯುವಕನ ಮನವಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ
ಭಾಗಮಂಡಲ - ತಲಕಾವೇರಿ ದೇವಾಲಯಗಳ ಕಾರ್ಯ ನಿರ್ವಹಣಾಧಿಕಾರಿ ಬಿ.ಎಂ. ಕೃಷ್ಣಪ್ಪ ಅವರು ಪವಿತ್ರ ತೀರ್ಥೋದ್ಭವಕ್ಕೆ ದೇವಾಲಯ ವತಿಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುವುದು. ಪವಿತ್ರ ತೀರ್ಥೋದ್ಭವ ಸಂಬಂಧ ವಿವಿಧ ಇಲಾಖೆಗಳು ಕೈಜೋಡಿಸುವಂತೆ ಮನವಿ ಮಾಡಿದರು.