ಮಡಿಕೇರಿ (ಕೊಡಗು): ಪ್ರವಾಹ ಪರಿಸ್ಥಿತಿ ಎದುರಿಸುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಎನ್‌ಡಿಆರ್‌ಎಫ್ ಹಾಗೂ ಪೊಲೀಸ್ ಇಲಾಖೆಗಳ ಸಹಭಾಗಿತ್ವದಲ್ಲಿ ರಕ್ಷಣಾ ಕಾರ್ಯಚರಣೆಯ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಮೈದಾನದ ಬಳಿಯಿರುವ ಪೊಲೀಸ್ ಕ್ಯಾಂಟೀನ್ ಕಟ್ಟಡದಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು ಆಯೋಜಿಸಿದ್ದ ಜಿಲ್ಲಾ ಪೊಲೀಸ್ ಮತ್ತು ಎನ್‌ಡಿಆರ್‌ಎಫ್ ಜಂಟಿ ರಕ್ಷಣಾ ಕಾರ್ಯಾಚರಣೆಯ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ವರ್ಷದಂತೆ ಈ ಭಾರಿಯೂ ವಿಪತ್ತು ಎದುರಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಮಳೆಗಾಲಕ್ಕೂ ಮೊದಲು ಜಿಲ್ಲಾ ಪೊಲೀಸ್ ಮತ್ತು ಎನ್‌ಡಿಆರ್‌ಎಫ್ ಜಂಟಿ ರಕ್ಷಣಾ ಕಾರ್ಯಾಚರಣೆಯ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ. ನಾಲ್ಕು ದಿನಗಳು ನಡೆಯುವ ಕಾರ್ಯಗಾರದಲ್ಲಿ ಮೌಖಿಕ ಹಾಗೂ ಪ್ರಾತ್ಯಕ್ಷಿಕೆ ನೀಡಲಾಗುವುದು.
ವಿಪತ್ತು ನಿರ್ವಹಣಾ ತಂಡಕ್ಕೆ ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಆಗುತ್ತಿದೆ. ಹಾಗೆಯೇ ನೀರಿನ ಪ್ರಮಾಣ ಎಷ್ಟಿದೆ ಎನ್ನುವ ಸಮರ್ಪಕ ಮಾಹಿತಿಯನ್ನು ಆಗಾಗ್ಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ನೀಡಲಾಗುವುದು. ಇದರಿಂದ ಕ್ಷಿಪ್ರ ರಕ್ಷಣಾ ಕಾರ್ಯಚರಣೆಗೆ ಸಾಧ್ಯವಾಗಲಿದೆ ಎಂದು ತಿಳಿಸಿದರು.