ಮಡಿಕೇರಿ: ಜುಲೈ 10ರಂದು ಬಕ್ರಿದ್ ಹಬ್ಬ ಹಿನ್ನೆಲೆ ಜಿಲ್ಲೆಯಲ್ಲಿ ಹಸುಗಳು ಬಲಿಯಾಗಬಾರದು. ಜಿಲ್ಲೆಯಿಂದ ಯಾವುದೇ ಹಸುಗಳು ಹೊರ ಹೋಗಬಾರದು. ಬೇರೆ ಜಿಲ್ಲೆಗಳಿಂದಲೂ ಕೊಡಗಿಗೆ ಬರಬಾರದು. ಚೆಕ್ ಪೋಸ್ಟ್ನಲ್ಲಿ ಪೊಲೀಸ್ ಬಂದೋಬಸ್ತ್ ಇರಬೇಕೆಂದು ಮಡಿಕೇರಿಯಲ್ಲಿ ಆಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಗೋಶಾಲೆ ನಿರ್ಮಾಣ, ಗೋಹತ್ಯೆ ನಿಷೇಧ ಕಾಯ್ದೆ ಸಮರ್ಪಕ ಜಾರಿ, ಇಲಾಖೆ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಅವರು ಮಾತನಾಡಿದರು. ಸರ್ಕಾರ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ್ದು, ಗೋವುಗಳು ಕಸಾಯಿ ಖಾನೆಗೆ ಹೋಗದಂತೆ ತಡೆಯಬೇಕು. ಚೆಕ್ ಪೋಸ್ಟ್ಗಳಲ್ಲಿ ಪಶು ವೈದ್ಯ ಸಿಬ್ಬಂದಿ ಜೊತೆ ಪೊಲೀಸರನ್ನು ನಿಯೋಜಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಉದಯಪುರದಲ್ಲಿ ನಡೆದ ಘಟನೆ ನಾಚಿಕೆಗೇಡಿನ ಹೇಯ ಕೃತ್ಯ : ಸಚಿವ ವಿ.ಸೋಮಣ್ಣ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆ ಆರಂಭಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಗೋಶಾಲೆಗೆ ಕನಿಷ್ಠ 20 ರಿಂದ 25 ಎಕರೆ ಭೂಮಿ ಕಾಯ್ದಿರಿಸಬೇಕಿದೆ. ಹಾಗೆಯೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಗೋಶಾಲೆ ನಿರ್ಮಾಣಕ್ಕೆ 10 ಎಕರೆ ಭೂಮಿ ಕಾಯ್ದಿರಿಸಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಕ್ಕೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಗೋಶಾಲೆ ಆರಂಭಕ್ಕೆ ಚಾಲನೆ ದೊರೆತಿದೆ ಎಂದು ಸಚಿವರು ತಿಳಿಸಿದರು.