ಮಡಿಕೇರಿ(ಕೊಡಗು): ಜಿಲ್ಲೆಯಲ್ಲಿ ಈ ವರ್ಷವೂ ಮಳೆಯ ರೌದ್ರಾವತಾರ ಮುಂದುವರಿದಿದೆ. ಬಿರುಗಾಳಿ ಸಹಿತ ಬಿಟ್ಟೂ ಬಿಡದೆ ವರುಣ ಆರ್ಭಟಿಸುವುತ್ತಿರುವುದರಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಡಿಕೇರಿಯಿಂದ ಸೋಮವಾರಪೇಟೆಗೆ ಹೋಗುವ ರಸ್ತೆ ಬಿರುಕು ಬಿಟ್ಟಿದೆ.
ಮಡಿಕೇರಿಯ ಹಟ್ಟಿಹೊಳೆ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಸುಮಾರು 500 ಅಡಿಯಷ್ಟು ಉದ್ದಕ್ಕೆ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡು ಭಾರಿ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ರಸ್ತೆ ಕುಸಿಯುವ ಹಂತ ತಲುಪಿದೆ.
ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು ಕಾವೇರಿ ಲಕ್ಷ್ಮಣ ತೀರ್ಥ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನಾಪೋಕ್ಲು ರಸ್ತೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ.
ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ರಸ್ತೆಯಲ್ಲಿ ಮಣ್ಣು ಕುಸಿತವಾಗುತ್ತಿದೆ. ದಕ್ಷಿಣ ಕೊಡಗಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕೃಷಿ ಜಮೀನು ಮುಳುಗಡೆಯಾಗಿ ರೈತರು ಕಂಗಾಲಾಗಿದ್ದಾರೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಜಿಲ್ಲೆಯ ಜನತೆ ಆತಂಕದಲ್ಲಿದ್ದಾರೆ. ಭಾರಿ ಮಳೆಗೆ ರಸ್ತೆ- ಬೆಟ್ಟ ಗುಡ್ಡಗಳು ಕುಸಿಯುವ ಭೀತಿ ಎದುರಾಗಿದೆ. ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ.