ಕೊಡಗು: ಜಿಲ್ಲೆಯಲ್ಲಿ ಮತ್ತೆ ವರುಣ ಅಬ್ಬರಿಸುತ್ತಿದ್ದಾನೆ. ಬಿರುಗಾಳಿಸಹಿತ ಜೋರು ಮಳೆಗೆ ಜನರು ಆತಂಕಗೊಂಡಿದ್ದಾರೆ.
ಕೆಲವು ದಿನಗಳ ಕಾಲ ಬಿಡುವು ನೀಡಿದ್ದ ಮಳೆರಾಯ ಮತ್ತೆ ಕಳೆದೆರಡು ದಿನಗಳಿಂದ ಉಗ್ರ ರೂಪ ತೋರಿಸುತ್ತಿದ್ದಾನೆ. ನಿರಂತರ ಮಳೆಯೊಂದಿಗೆ ರಭಸದಿಂದ ಬೀಸುತ್ತಿರುವ ಗಾಳಿಯಿಂದಾಗಿ ದೊಡ್ಡ ಗಾತ್ರದ ಮರಗಳು, ವಿದ್ಯುತ್ ಕಂಬಗಳು ಮುರಿದು ಬೀಳುತ್ತಿವೆ.
ಕಳೆದ ಮೂರು ವರ್ಷವೂ ಆಗಸ್ಟ್‌ನಲ್ಲಿ ಸುರಿದ ಮಹಾಮಳೆಯಿಂದ ಆಪತ್ತು ಎದುರಾಗಿ ಮನೆಗಳನ್ನು ಕಳೆದುಕೊಂಡು ಅನೇಕರು ಬೀದಿಪಾಲಾಗಿದ್ದರು. ನದಿತೀರದಲ್ಲಿ ಹಲವಾರು ಗ್ರಾಮಗಳು ಮುಳುಗಡೆಯಾಗಿದ್ದವು. ಮಳೆ ಹೆಚ್ಚಾಗುತ್ತಿದ್ದಂತೆ ನದಿನೀರಿನ ಮಟ್ಟವೂ ಏರಿಕೆಯಾಗಿದೆ.
ಇದೇ ವೇಳೆ, ಜಿಲ್ಲಾಡಳಿತ ಅಪಾಯ ಉಂಟಾಗುವ ಸ್ಥಳಗಳನ್ನು ಗುರುತು ಮಾಡಿದ್ದು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜನರಿಗೆ ಸೂಚಿಸಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ತಿಂಗಳಿಂದ ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್ (NDRF) ತಂಡವನ್ನು ನಿಯೋಜಿಸಲಾಗಿದೆ.
ಕೊಡಗು ಜಿಲ್ಲೆಯ ಮಳೆ ವಿವರ: ಇಂದು ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 34.68 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 177.07 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ 1,824.65 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1422.39 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 51.80 ಮಿ.ಮೀ. ಕಳೆದ ವರ್ಷ ಇದೇ ದಿನ 238.75 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2495.84 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1959.94 ಮಿ.ಮೀ. ಮಳೆ ಸುರಿದಿತ್ತು.
ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 17.98 ಮಿ.ಮೀ. ಕಳೆದ ವರ್ಷ ಇದೇ ದಿನ 157.25 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1480.66 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1341.22 ಮಿ.ಮೀ. ಮಳೆಯಾಗಿತ್ತು.
ಇದನ್ನೂ ಓದಿ : ದಾವಣಗೆರೆ: ರೈತರಿಗೆ ಕಂಟಕವಾದ ಬಹು ರಾಷ್ಟ್ರೀಯ ಕಂಪನಿ ರಾಸಾಯನಿಕಯುಕ್ತ ನೀರು
ಸೋಮವಾರಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 34.27 ಮಿ.ಮೀ. ಕಳೆದ ವರ್ಷ ಇದೇ ದಿನ 135.20 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1497.44 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 966 ಮಿ.ಮೀ. ಮಳೆಯಾಗಿತ್ತು.
ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಿದ್ದು, ಇಂದಿನ ನೀರಿನ ಮಟ್ಟ 2855.12 ಅಡಿಗಳಷ್ಟಿದೆ. ಕಳೆದ ವರ್ಷ ಇದೇ ದಿನ 2855.16 ಅಡಿಯಷ್ಟು ನೀರು ತುಂಬಿತ್ತು.
ಇಂದಿನ ನೀರಿನ ಒಳಹರಿವು 7,487 ಕ್ಯುಸೆಕ್ ಇದ್ದು, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 9081 ಕ್ಯುಸೆಕ್ ಇತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 9,333 ಕ್ಯುಸೆಕ್ ಇದ್ದು, ನಾಲೆಗೆ 350 ಕ್ಯುಸೆಕ್ ನೀರು ಹರಿ ಬಿಡಲಾಗಿದೆ. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 11,811 ಕ್ಯುಸೆಕ್, ನಾಲೆಗೆ 300 ಕ್ಯುಸೆಕ್ ನೀರು ಬಿಡಲಾಗಿದೆ.