ಕೊಡಗು: ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ. ಜಿಲ್ಲೆಯ ಹಲವೆಡೆ ಕಳೆದೆರಡು ದಿನಗಳಿಂದ ಗಾಳಿ ಸಹಿತ ನಿರಂತರವಾಗಿ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಎನ್ಡಿಆರ್ಎಫ್ ತಂಡ ನಿಯೋಜನೆ ಮಾಡಿದ್ದು, ಅಪಾಯದ ಸ್ಥಳಗಳಿಗೆ ನದಿಪಾತ್ರದ ಗ್ರಾಮಗಳಿಗೆ ಎನ್ಡಿಆರ್ಎಫ್ ಹೆಚ್ಚಿನ ನಿಗಾ ಇಟ್ಟಿದೆ.
ಮುಂಜಾನೆಯಿಂದ ಉತ್ತಮ ಮಳೆಯಾಗುತ್ತಿದ್ದು, ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಭಾಗಮಂಡಲ, ತಲಕಾವೇರಿ, ನಾಪೋಕ್ಲು ಕಕ್ಕಬ್ಬೆ, ಭಾಗದಲ್ಲೂ ಮಳೆಯ ಆರ್ಭಟ ಹೆಚ್ಚಾಗಿದ್ದು, ಹಾರಂಗಿ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.
ಕೊಡಗು ಜಿಲ್ಲೆಯಲ್ಲಿ ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲಾಡಳಿತ ಮಳೆಗಾಲದ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದ್ದು, ಹೆಚ್ಚಿನ ಅನಾಹುತಗಳನ್ನ ತಪ್ಪಿಸಲು ಎನ್ಡಿಆರ್ಎಫ್ ತಂಡವನ್ನ ನಿಯೋಜಿಸಿದೆ.
ಇನ್ನು ಗುಡ್ಡ ಪ್ರದೇಶದಲ್ಲಿ ಹಾಗೂ ನದಿ ಪಾತ್ರದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿದ್ದು, ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.