ಕೊಡಗು: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ, ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ ನೀರನ್ನು ನದಿಗೆ ಬಿಟ್ಟಿದ್ದಾರೆ.
ಜಲಾಶಯಕ್ಕೆ 4,864 ಕ್ಯೂಸೆಕ್ ನೀರಿನ ಒಳಹರಿವು ಇದ್ದು, 1,752 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ. ಶಾಸಕ ಅಪ್ಪಚ್ಚು ರಂಜನ್ ನಿರ್ದೇಶನದಂತೆ ನದಿಗೆ ನೀರನ್ನು ಹೊರಗೆ ಬಿಡಲಾಗಿದೆ. ಕಳೆದ ವರ್ಷ ತಡವಾಗಿ ನೀರು ಹರಿಸಲಾಗಿತ್ತು. ಪರಿಣಾಮ ಕುಶಾಲನಗರ ಭಾಗದ ಹಲವು ಬಡಾವಣೆಗಳು ಮುಳುಗಡೆಯಾಗಿದ್ದವು.
ಹೀಗಾಗಿ, ಹಿಂದಿನ ಘಟನೆಗಳು ಮರುಕಳಿಸಬಾರದೆಂದು ಈ ಬಾರಿ ಬೇಗನೇ ನೀರನ್ನು ಹೊರಗೆ ಬಿಡಲಾಗಿದೆ. ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ಮಳೆ 60.32 ಮಿ.ಮೀ ಮಳೆ ಆಗಿದೆ. ಮಡಿಕೇರಿಯಲ್ಲಿ 79.55, ವಿರಾಜಪೇಟೆಯಲ್ಲಿ 59.07 ಹಾಗೂ ಸೋಮವಾರ ಪೇಟೆಯಲ್ಲಿ 42.35 ಮಿ.ಮೀ ಮಳೆ ಆಗಿದೆ.