ಮಡಿಕೇರಿ: ಖಾಸಗಿ ವಾಹಿನಿಯಲ್ಲಿ ನಡೆದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಕೊಡಗಿನ ರಾಹುಲ್ ಹಾಗೂ ಬೃಂದಾ ಜೋಡಿಗೆ ತವರೂರು ಮೂರ್ನಾಡುವಿನಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಇಬ್ಬರನ್ನೂ ಭವ್ಯ ಮೆರವಣಿಗೆಯ ಮೂಲಕ ಕರೆತಂದು ವಿಶೇಷ ಗೌರವ ಸಲ್ಲಿಸಲಾಯಿತು.
ಇಬ್ಬರು ಸಾಧಕರನ್ನು ಚಂಡೆ ವಾದ್ಯದೊಂದಿಗೆ ಮೂರ್ನಾಡುವಿನ ಗಣಪತಿ ದೇವಾಲಯದಿಂದ ಮುಖ್ಯರಸ್ತೆಯ ಮೂಲಕ ತೆರಳಿ ಗೌಡಸಮಾಜದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಾಕಷ್ಟು ಅಭಿಮಾನಿಗಳು ತಮ್ಮೂರಿನ ಸಾಧಕರೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂತಸಪಟ್ಟರು. ಬಳಿಕ ಮೂರ್ನಾಡು ಗೌಡ ಸಮಾಜದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸ್ಪರ್ಧೆಯ ವಿಜೇತ ರಾಹುಲ್ ಪ್ರತಿಕ್ರಿಯಿಸಿ, 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಗೆದ್ದಿರೋದ್ರಿಂದ ಬಹಳ ಸಂತೋಷ ಆಗಿದೆ. ನನ್ನ ಸ್ವಂತ ಊರಿನಲ್ಲಿ ಈ ರೀತಿಯ ಸ್ವಾಗತ ಸಿಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಈ ಒಂದು ಅದ್ಧೂರಿ ಸ್ವಾಗತ ನಿಜಕ್ಕೂ ತುಂಬ ಸಂತೋಷ ಕೊಟ್ಟಿದೆ. ಒಂದು ಉದ್ದೇಶಕಾಗಿ ನೃತ್ಯ ಕಲೆಯನ್ನು ಬಳಸಬೇಕು. ಇದ್ರ ಜೊತೆಗೆ, ಡ್ಯಾನ್ಸ್ ಅನ್ನು ಕೇವಲ ಕಲೆಯಾಗಿ ಮಾತ್ರವಲ್ಲದೇ ಶಿಕ್ಷಣವಾಗಿ ಹೆಚ್ಚು ಜನ ಕಲಿಯುವಂತೆ ಹಾಗೂ ಅತಿ ಹೆಚ್ಚು ಜನರನ್ನು ತಲುಪುವಂತೆ ಮಾಡಬೇಕು ಎಂಬ ಎರಡು ನನಗಿದೆ' ಎಂದರು.
ಇದನ್ನೂ ಓದಿ: ಅದ್ಧೂರಿ ರಾಜ್ಯೋತ್ಸವ ಆಚರಣೆ ಕುರಿತು ಇನ್ನೂ ತೀರ್ಮಾನವಾಗಿಲ್ಲ: ಸಿಎಂ ಬೊಮ್ಮಾಯಿ
ಸ್ಪರ್ಧೆಯ ವಿಜೇತೆ ಬೃಂದಾ ಮಾತನಾಡಿ, 'ರಾಹುಲ್ ನನ್ನ ಜೋಡಿ ಆಗಿ ಸಿಕ್ಕಿದ್ದು ಮೊದಲ ಖುಷಿ ಆದ್ರೆ, ಗೆದ್ದು ಬಂದ ನಮಗೆ ಈ ರೀತಿ ಮೆರವಣಿಗೆ ಮೂಲಕ ಊರಿನ ಜನತೆ ಪ್ರೀತಿ ತೋರಿರುವುದು ಮತ್ತಷ್ಟು ಸಂತಸ ನೀಡಿದೆ. ಮುಂದೆಯೂ ಡ್ಯಾನ್ಸ್ ಫೀಲ್ಡ್ನಲ್ಲಿ ಮುಂದುವರೆಯುವ ಆಲೋಚನೆ ಇದೆ' ಎಂದು ಹೇಳಿದರು.