ಮಡಿಕೇರಿ (ಕೊಡಗು): ದಕ್ಷಿಣದ ಕಾಶ್ಮೀರ ಕೊಡಗು ಎಲ್ಲಾ ಋತುಗಳಲ್ಲೂ ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿಯೇ ಇರುತ್ತದೆ. ಪ್ರವಾಸಿಗರ ಆಕರ್ಷಣೆಯ ಕೊಡಗು ಜಿಲ್ಲೆಗೆ ಮತ್ತೊಂದು ಪ್ರವಾಸಿ ತಾಣ ಸೇರ್ಪಡೆಯಾಗಿದೆ. ಕೊಡಗಿನಲ್ಲಿ ನೂತನವಾಗಿ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ನಿರ್ಮಾಣವಾಗಿದೆ. ಇದು ದಕ್ಷಿಣ ಭಾರತದ ಎರಡನೇ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ಎನಿಸಿದೆ. ಪಶ್ಚಿಮ ಘಟ್ಟದ ಕಾಡು ಮತ್ತು ಬೆಟ್ಟಗಳ ನಡುವೆ ಇರುವ ಅದ್ಭುತ ಈ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ಪ್ರವಾಸಿಗರನ್ನು ಸೂಚಿಗಲ್ಲಿನಂತೆ ಸೆಳೆಯುತ್ತಿದೆ.
ಮಡಿಕೇರಿ ಸಮೀಪದ ಉಡೋತ್ ಮೊಟ್ಟೆಯ ಪಪ್ಪೀಸ್ ಪ್ಲಾಂಟೇಷನ್‍ನಲ್ಲಿ ಸುಮಾರು 32 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಸುಮಾರು 5 ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿರುವ ಈ ಬ್ರಿಡ್ಜ್‌ನಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು.
ಸುಂದರ ಪ್ರಾಕೃತಿಕ ಸೌಂದರ್ಯದ ಮೂಲಕ ಕೊಡಗು ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿದೆ. ಸದ್ಯ ಈ ಪ್ರವಾಸೋದ್ಯಮಕ್ಕೆ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ಹೊಸ ಸೇರ್ಪಡೆಯಾಗಿದೆ. ಖಾಸಗಿಯಾಗಿ ಆರಂಭವಾಗಿರುವ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ಇಡೀ ದಕ್ಷಿಣ ಭಾರತದ ಗಮನ ಸೆಳೆಯುತ್ತಿದೆ. ಹಚ್ಚ ಹಸಿರ ಬೆಟ್ಟ ಗುಡ್ಡ ನಡುವಿರುವ ಆ ಗ್ಲಾಸ್ ಬ್ರಿಡ್ಜ್ ಹೇಗಿದೆ? ಯಾವ ರೀತಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂಬುದಕ್ಕೆ ಇಲ್ಲಿದೆ ನೋಡಿ ಒಂದು ನೋಟ.
ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ಮೇಲೆ ನಿಂತು ನೋಡಿದರೆ ಭಯದ ಜೊತೆಗೆ ನೋಟವೇ ರೋಮಾಂಚಕವಾಗಿದೆ. ಬೆಟ್ಟಗಳ ಸುತ್ತಲೂ ಹಸಿರಿರಲು, ಬೆಟ್ಟ ಗುಡ್ಡದ ಇಕ್ಕೆಲಗಳು ಕೈಬೀಸಿ ಕರೆಯುವಂತಿದೆ. ಮೇಲೆ ನಿಂತು ನೋಡಿದ್ರೆ ಮುಗಿಲು ಕೈಗೆ ಸಿಗುವಂತೆ ಭಾಸವಾಗುತ್ತದೆ. ಗಾಜಿನ ಮೇಲೆ ಹೆಜ್ಜೆ ಹಾಕಿ ಪ್ರಕೃತಿಯ ಸವಿಯುತ್ತ ಪ್ರವಾಸಿಗರು ಖುಷಿ ಪಡುತ್ತಿದ್ದಾರೆ.
ಕೊಡಗಿನ ಈ ಸ್ವಾಭಾವಿಕ ಪ್ರಕೃತಿಯ ಸೌಂದರ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಅದರಲ್ಲೂ ಇಲ್ಲಿನ ವೀವ್ಯೂ ಪಾಯಿಂಟ್‌ಗಳಂತೂ ಮನಮೋಹಕ. ಅದರ ಸಾಲಿಗೆ ಸದ್ಯ ಬೆಟ್ಟದ ಇಕ್ಕೆಲಗಳ ನಡುವೆ ಖಾಸಗಿಯವರಿಂದ ನಿರ್ಮಾಣವಾಗಿರುವ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ಸೇರಿದೆ. ಹಸಿರ ಪ್ರಕೃತಿಯ ನಡುವೆ ಪಾರದರ್ಶಕ ಗಾಜಿನ ಮೇಲೆ ನಡೆಯುವ ರೋಮಾಂಚಕ ಅನುಭವ ನೆಕ್ಸ್ಟ್ ಲೆವೆಲ್ನಲ್ಲಿದೆ.
ಈ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ಇರೋದು ಮಂಜಿನ ನಗರಿ ಮಡಿಕೇರಿ ಹೊರವಲಯದ ಉಡೋತ್ ಎಂಬಲ್ಲಿ. 31 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಈ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ಎಲ್ಲರ ಗಮನ ಸೆಳೆಯುತ್ತಿದೆ. ಸುಮಾರು 5 ಟನ್ ಭಾರ ಹೊರುವ ಸಾಮರ್ಥ್ಯದ ಈ ಬ್ರಿಡ್ಜ್‌ನಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಇಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಅವರಿಂದ ಈ ಬ್ರಿಡ್ಜ್ ಲೋಕಾರ್ಪಣೆಗೊಂಡಿದೆ. ಕೊಡಗಿನ ಪ್ರವಾಸೋದ್ಯಮಕ್ಕೆ ಖಾಸಗಿಯವರ ಇಂತಹ ಕೊಡುಗೆ ಬಗ್ಗೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಕೇರಳದ ವಯನಾಡ್‌ನಲ್ಲಿ ಖಾಸಗಿಯಾಗಿ ನಿರ್ಮಾಣವಾಗಿದ್ದ ಗ್ಲಾಸ್ ಸ್ಕೈವಾಕ್ ಬ್ರಿಡ್ಜ್ ಬಿಟ್ಟರೆ, ದಕ್ಷಿಣ ಭಾರತದಲ್ಲಿ ಇರುವ ಗ್ಲಾಸ್ ಬ್ರಿಡ್ಜ್ ಎನ್ನುವ ಖ್ಯಾತಿಗೆ ಕೊಡಗಿನ ಈ ಗ್ಲಾಸ್ ಬ್ರಿಡ್ಜ್ ಪಾತ್ರವಾಗಿದೆ. ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಇಂದು ಆಕರ್ಷಕ ಸೇತುವೆಯನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಪೊನ್ನಣ್ಣ, ಕೊಡಗು ಪ್ರಕೃತಿ ದತ್ತವಾದ ಜಿಲ್ಲೆಯಾಗಿದೆ. ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು. ಈ ಅಪರೂಪದ ಯೋಜನೆಯಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎಂದರು.
ಇದನ್ನೂ ಓದಿ: ಭಾರತದ 10 ಸುಂದರ ಹಳ್ಳಿಗಳಿಗೆ ಭೇಟಿ ಕೊಡಲಿದ್ದಾರೆ ಆನಂದ್ ಮಹೀಂದ್ರಾ: ಕರ್ನಾಟಕದ ಗ್ರಾಮವೂ ಈ ಪಟ್ಟಿಯಲ್ಲಿದೆ