ಕೊಡಗು: ಪ್ರವಾಹ ಹಾಗೂ ಭೂ ಕುಸಿತ ಪ್ರದೇಶಗಳಿಗೆ ಶಾಸಕ ಹೆಚ್.ಸಿ.ಮಹದೇವಪ್ಪ ತಂಡ ಭೇಟಿ ನೀಡಿ ಪರಿಶೀಲಿಸಿ ನಿರಾಶ್ರಿತರಿಗೆ ಸಾಂತ್ವಾನ ಹೇಳಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಹೆಚ್.ಸಿ.ಮಹದೇವಪ್ಪ, ಕೊಡಗು ಜಿಲ್ಲೆ ಕಳೆದ ಮತ್ತು ಈ ವರ್ಷ ಕೂಡ ಅತಿವೃಷ್ಟಿಗೆ ಒಳಗಾಗಿ ಸಾಕಷ್ಟು ನಷ್ಟ ಅನುಭವಿಸಿದೆ. ಜಿಲ್ಲೆಯಲ್ಲಿ ಕಂಡು-ಕೇಳರಿಯದ ರೀತಿಯಲ್ಲಿ ಪ್ರವಾಹ, ಭೂ ಕುಸಿತ ಸಂಭವಿಸಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಸೂಕ್ತ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಕೊಡಗಿನ ರಕ್ಷಣೆಗೆ ಮುಂದಾಗಬೇಕು. ರಾಜ್ಯದ ಹಲವು ಭಾಗಗಳಲ್ಲಿ ಕೂಡ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ರಕ್ಷಣಾ ಕಾರ್ಯದಲ್ಲಿ ಸೇನೆ ಉತ್ತಮ ಕಾರ್ಯ ಮಾಡಿರುವುದು ಶ್ಲಾಘನೀಯ. ಸರ್ಕಾರದ ಮಂತ್ರಿ ಮಂಡಲ ರಚನೆ ಆಗದಿದ್ದರೂ ಉತ್ತಮ ಕೆಲಸ ಮಾಡಿದೆ. ಮಂತ್ರಿ ಮಂಡಲ ರಚಿಸಿದ್ದರೆ ಹೆಚ್ಚಿನ ಅನಾಹುತ ತಪ್ಪಿಸಬಹುದಿತ್ತು ಎಂದರು.
ರಾಜ್ಯ ಸರ್ಕಾರದ ಪರಿಹಾರ ನಿರಾಶ್ರಿತರಿಗೆ ಸಾಲುವುದಿಲ್ಲ. ಪ್ರಧಾನಮಂತ್ರಿಗಳು ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ತಕ್ಷಣವೇ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ನಿರಾಶ್ರಿತರಿಗೆ ಹೊಸ ವಸತಿ ನೀತಿ ಘೋಷಣೆ ಮಾಡಿ ಸೂರು ಒದಗಿಸಬೇಕು. ಜಿಲ್ಲೆಯ ಪುನರ್ ನಿರ್ಮಾಣಕ್ಕೆ ತಕ್ಷಣವೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಿ ಕೊಡಗಿನ ಪರಿಸರ ಸಮತೋಲನ ಹಾಳಾಗದಂತೆ ಸರ್ಕಾರಗಳು ಎಚ್ಚರ ವಹಿಸಬೇಕು ಎಂದರು.