ಕುಶಾಲನಗರ (ಕೊಡಗು): ನಾಲ್ಕು ದಿನಗಳ ಕಾಲ ಸುರಿದಿದ್ದ ರಣಭೀಕರ ಮಳೆಗೆ ಕಾವೇರಿ ಉಕ್ಕಿ ಹರಿದ ಪರಿಣಾಮ ಕೊಡಗಿನ ಹಲವು ಗ್ರಾಮಗಳು ಪ್ರವಾಹದಲ್ಲಿ ಮುಳುಗಿ ಹೋಗಿದ್ದವು. ಇದೀಗ ಪ್ರವಾಹ ತಗ್ಗಿದ್ದು, ಜನರು ಮನೆಗಳ ಸ್ವಚ್ಛತೆಯಲ್ಲಿ ತೊಡಗಿದ್ದಾರೆ.
ಕುಶಾಲನಗರದ ಹಲವು ಬಡಾವಣೆಗಳು ಮತ್ತು ನಾಪೋಕ್ಲು ಸಮೀಪದ ಚೆರಿಯಪರಂಬು, ಸಿದ್ದಾಪುರ ಕರಡಿಗೋಡು, ಕುಂಬಾರಗುಂಡಿ, ಬೆಟ್ಟದಕಾಡು, ಗುಹ್ಯ ಸೇರಿದಂತೆ ಹಲವು ಗ್ರಾಮಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದವು.
ಸದ್ಯ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದಂತೆ ಜನರು ತಮ್ಮ ಮನೆಗಳತ್ತ ಮುಖಮಾಡಿದ್ದಾರೆ. ಕೆಲವರು ತಮ್ಮ ಮನೆಗಳನ್ನು ಮತ್ತು ಪಾತ್ರೆ, ವಸ್ತುಗಳನ್ನು ತೊಳೆದು ಸ್ವಚ್ಛಗೊಳಿಸುತ್ತಿದ್ದಾರೆ. ಸಂಪುಗಳಲ್ಲಿ ಗಲೀಜು ನೀರು ತುಂಬಿಕೊಂಡಿರುವುದರಿಂದ ಅದರಲ್ಲಿರುವ ನೀರನ್ನು ಮೋಟಾರ್‌ಗಳ ಮೂಲಕ ಖಾಲಿ ಮಾಡುತ್ತಿದ್ದಾರೆ.
ಪ್ರವಾಹದಲ್ಲಿ ತೇಲಿಬಂದಿದ್ದ ಅಪಾರ ಪ್ರಮಾಣದ ಕೆಸರು, ಕಸಕಡ್ಡಿ ಬಡಾವಣೆಗಳಲ್ಲಿ ತುಂಬಿದ್ದ ಕಾರಣ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಹೀಗಾಗಿ, ಕುಶಾಲನಗರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಎಲ್ಲಾ ಬೀದಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸುತ್ತಿದ್ದಾರೆ.