ಕೊಡಗು: ಆಶಾ ಕಾರ್ಯಕರ್ತೆ ಮತ್ತು ಸೀಲ್ಡೌನ್ ಆದ ಮನೆಯವರಿಗೆ ಮದ್ಯ ವ್ಯಸನಿಗಳು ಆವಾಜ್ ಹಾಕಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹಾನಗಲ್ಲು ಬಾಣೆ ಗ್ರಾಮದಲ್ಲಿ ನಡೆದಿದೆ.
ಹಾನಗಲ್ಲು ಬಾಣೆಯಲ್ಲಿ ಕೆಲವು ಕುಟುಂಬದವರಿಗೆ ಸೋಂಕು ತಗುಲಿದ್ದು, ಕೆಲವು ಮನೆಗಳನ್ನು ಸೀಲ್ಡೌನ್ ಮಾಡಲಾಗಿತ್ತು. ಈ ಹಿನ್ನೆಲೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮತ್ತು ಆಶಾ ಕಾರ್ಯಕರ್ತೆ ಸೇರಿ ಸೋಂಕಿತರ ಆರೋಗ್ಯ ವಿಚಾರಿಸಿಕೊಂಡು ಅಗತ್ಯ ವಸ್ತುಗಳನ್ನು ಕೊಟ್ಟು ಬರುವಾಗ ಈ ಘಟನೆ ನಡೆದಿದೆ. ಕೆಲವು ಪುಂಡರು ಅಲ್ಲಿಗೆ ಏಕೆ ಹೋಗಿದ್ದಿರಿ? ಅಲ್ಲಿಗೆ ಹೋಗಬಾರದಿತ್ತು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾನವೀಯತೆ ಮರೆತು ಮೃಗಗಳ ರೀತಿಯಲ್ಲಿ ಪುಂಡರು ವರ್ತಿಸಿದ್ದಾರೆಂದು ಆಶಾ ಕಾರ್ಯಕರ್ತೆ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಸೋಂಕಿತೆ ಮೇಲೆ ಆ್ಯಂಬುಲೆನ್ಸ್ ಡ್ರೈವರ್ನಿಂದ ಅತ್ಯಾಚಾರಕ್ಕೆ ಯತ್ನ, ಆರೋಪ!
ಸೋಂಕಿತರ ಮನೆ ಬಳಿ ಸೀಲ್ಡೌನ್ ಮಾಡಿ ಕಟ್ಟಿದ್ದ ಟೇಪ್ಗಳನ್ನು ಕೆಲವು ಪುಂಡರು ಕಿತ್ತು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಎಲ್ಲ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಆಶಾ ಕಾರ್ಯಕರ್ತೆಯರು ದೂರು ನೀಡಿದ್ರೂ ಕೂಡ ಪೊಲೀಸರು ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ. ಸೀಲ್ ಡೌನ್ ಟೇಪ್ ಕಿತ್ತೆಸೆದು ಗಲಾಟೆ ಮಾಡಿದ ಪುಂಡರ ವಿರುದ್ಧ ಕ್ರಮ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.