ವಿರಾಜಪೇಟೆ : ಅಂಗಡಿಯಿಂದ ವಸ್ತುಗಳು ಖರೀದಿಸಿ ಮನೆಗೆ ವಾಪಸ್ ತೆರಳುತಿದ್ದ ವೇಳೆ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿದೆ. ಇದರಿಂದಾಗಿ ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಳ್ತೋಡು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕೊಳ್ತೋಡು ಬೈಗೊಡು ಗ್ರಾಮದ ಮಾಳೇಟಿರ ಸೋಮಣ್ಣ ಅವರ ಲೈನ್ ಮನೆಯಲ್ಲಿ ವಾಸವಿದ್ದ ಪಣಿಎರವರ ಮಾದು(48 ವರ್ಷ)ಮೃತ ದುರ್ದೈವಿ. ಶನಿವಾರ ಸಂಜೆ 7 ಗಂಟೆಗೆ ದಿನಸಿ ವಸ್ತುಗಳನ್ನು ಖರೀದಿಸಿ ಮನೆಗೆ ಮರುಳುತ್ತಿದ್ದಾಗ ಕಾರ್ಮಿಕರ ಮೇಲೆ ಕಾಡಾನೆ ದಾಳಿ ಮಾಡಿದೆ.
ಆನೆಯಿಂದ ತಪ್ಪಿಸಿಕೊಳ್ಳುವಾಗ ಎಲ್ಲರೂ ಓಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಾದುವನ್ನು ಬೆನ್ನಟ್ಟಿದ ಆನೆ ಅವರನ್ನು ಸೊಂಡಿಲಿನಿಲಿಂದ ಹಿಡಿದು ನೆಲಕ್ಕೆ ಅಪ್ಪಳಿಸಿದೆ, ಪರಿಣಾಮ ಬೆನ್ನುಮೂಳೆ ಮುರಿತವಾಗಿದೆ.
ಉಳಿದ ಕಾರ್ಮಿಕರು ಮಾದುವನ್ನು ಗೊಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ರಾತ್ರಿ 10:30ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತನ ಪತ್ನಿ ಬೋಜಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.