ಕೊಡಗು : ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕೊಟ್ಟಿರುವುದರಿಂದ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬೆಟ್ಟದಳ್ಳಿ ಹಾಗೂ ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಬೆಟ್ಟದಳ್ಳಿ ಜಂಕ್ಷನ್ ಬಳಿ ಶನಿವಾರ ರಸ್ತೆ ತಡೆ ನಡೆಸಿದ ಗ್ರಾಮಸ್ಥರು ಪ್ರವಾಸಿಗರ ವಾಹನಗಳನ್ನು ತಡೆದು ವಾಪಸ್ಸು ಕಳುಹಿಸಿದ ಪ್ರಸಂಗವೂ ನಡೆಯಿತು. ನಗರ ಪ್ರದೇಶಗಳಲಿದ್ದ ಸೋಂಕು ಈಗ ಗ್ರಾಮೀಣ ಭಾಗದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಮಲ್ಲಳ್ಳಿ ಜಲಪಾತ ವೀಕ್ಷಿಸುವ, ಬೆಟ್ಟದ ಮೇಲೆ ಟ್ರೆಕ್ಕಿಂಗ್ ಮಾಡುವ ನೆಪದಲ್ಲಿ ರೆಸಾರ್ಟ್‌ಗಳಲ್ಲಿ ಪ್ರವಾಸಿಗರು ಮೋಜು-ಮಸ್ತಿ ಮಾಡುತ್ತಿದ್ದಾರೆ. ಹಾಗಾಗಿ ಸೋಂಕು ಹೆಚ್ಚುತ್ತಿದೆ ಎಂದು ಆರೋಪಿಸಿದರು.
ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಅಂಗಡಿಗಳಿಗೆ ತೆರಳಿ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಅದರಲ್ಲಿ ಸೋಂಕಿತರನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ಮಳೆಗಾಲದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಬೇಕಾಗಿದೆ. ಈಗಂತೂ ಕೊರೊನಾ ಭಯದಿಂದ ಮನೆ ಬಿಟ್ಟು ಹೊರಬರಲು ರೈತರು ಭಯಪಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.