ಮೈಸೂರು/ಕೊಡಗು: ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಕೊಡಗಿನಲ್ಲಿ ಕ್ರಿಸ್ಮಸ್ ಸಂಭ್ರಮ ಜೋರಾಗಿತ್ತು. ಚರ್ಚ್ ಸೇರಿದಂತೆ ವಿವಿಧ ಪ್ರಾರ್ಥನಾ ಮಂದಿರಗಳಲ್ಲಿ ಕ್ರಿಸ್ಮಸ್ ಆಚರಣೆ ಭರ್ಜರಿಯಾಗಿ ನಡೆದಿದೆ.
ನಗರದ ಸೇಂಟ್ ಫಿಲೋಮಿನಾ ಚರ್ಚ್‌ನಲ್ಲಿ ಹಬ್ಬದ ಸಂಭ್ರಮ ಜೋರಾಗಿದ್ದು, ಧರ್ಮಗುರು ಕೆ.ಎ.ವಿಲಿಯಂ ಅವರು ಬಾಲ ಏಸುವಿನ ಪ್ರತಿಮೆಯನ್ನು ಚರ್ಚ್‌ಗೆ ತಂದು ಬಲಿಪೂಜೆ ಮಾಡಿದ್ದಾರೆ. ನಂತರ ಕ್ರೈಸ್ತ ಬಾಂಧವರು ಏಸು ಗೀತೆ ಹಾಡುವ ಮೂಲಕ ಹಬ್ಬದ ಮೆರುಗನ್ನು ಹೆಚ್ಚಿಸಿದ್ದಾರೆ. ಚಚ್೯ಗಳಿಗೆ ಕುಟುಂಬ ಸಮೇತರಾಗಿ ಕ್ರೈಸ್ತ ಬಾಂಧವರು ಆಗಮಿಸಿ ಕೇಕ್ ಮತ್ತು ಇನ್ನಿತರೆ ಸಿಹಿ ತಿನಿಸುಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಕೊಡಗಿನ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ ಹಾಗೂ ಗೋಣಿಕೊಪ್ಪಲು ಸೇರಿದಂತೆ ವಿವಿಧೆಡೆ ಕ್ರೈಸ್ತ ಬಾಂಧವರು ಚರ್ಚ್‌ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಸಂಭ್ರಮ ಸಡಗರದಿಂದ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದ್ದಾರೆ.
ಮಡಿಕೇರಿ ನಗರದಲ್ಲಿ ಸಂತ ಮೈಕೆಲ್ ಚರ್ಚ್, ಸಿಎಸ್‌ಐ ಶಾಂತಿ ಚರ್ಚ್‌ನಲ್ಲಿ ವಿಭಿನ್ನ ವಿನ್ಯಾಸದ ಗೋದಲಿಗಳು, ಸಾಂಟಾ ಕ್ಲಾಸ್‌ನ ಪ್ರತಿಬಿಂಬ, ಶುಭ ಸಂಕೇತದ ಗಂಟೆಗಳು ಗಮನ ಸೆಳೆದವು. ಮನೆಗಳು ಮತ್ತು ಚರ್ಚ್‌ಗಳನ್ನು ಅಲಂಕರಿಸಲಾಗಿತ್ತು.
ಸಂಟಾ ಕ್ಲಾಸ್ ವೇಷ ಧರಿಸಿದ ಪುಟಾಣಿಗಳು ಮನೆ ಮನೆಗೆ ತೆರಳಿ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ಸೆಂಟ್ ಮೈಕೆಲ್ರ ಚರ್ಚ್ನಲ್ಲಿ ಹಬ್ಬದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.