ಕೊಡಗು:ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಬಿಜೆಪಿ ಸೇರ್ಪಡೆ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಪಕ್ಷಕ್ಕೆ ಯಾರೇ ಬಂದರೂ ನಾವು ಸ್ವಾಗತಿಸುತ್ತೇವೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿಲ್ ಲಾಡ್ ಬಿಜೆಪಿ ಸೇರ್ಪಡೆ ವಿಚಾರ ಈ ಮೊದಲೇ ಮಾತುಕತೆ ನಡೆದಿತ್ತು. ರಾಜ್ಯಕ್ಕೆ ಒಳಿತಾಗುವ ತೀರ್ಮಾನವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದ್ರು. ಇನ್ನೂ ಅನರ್ಹ ಶಾಸಕರ ಸುಪ್ರೀಕೋರ್ಟ್ ತೀರ್ಪಿನ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎನ್ನುವ ವಿರೋಧ ಪಕ್ಷಗಳ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ನಾವು ಅವುಗಳಿಗೆಲ್ಲ ಉತ್ತರಿಸಲು ಹೋಗಲ್ಲ. ಅನರ್ಹ ಶಾಸಕರ ಪರವಾದ ವಕೀಲರು ವಾದ ಮಂಡಿಸಿದ್ದರು. ಅನರ್ಹ ಶಾಸಕರು ನ್ಯಾಯಾಲಯಕ್ಕೆ ಗೌರವ ಕೊಡುವ ಕೆಲಸ ಮಾಡುತ್ತಾರೆ ಎಂದರು.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಸುಧಾರಣೆ ಆಗಬೇಕು ಎನ್ನುವುದಷ್ಟೇ ನನ್ನ ಉದ್ದೇಶ. ಇದಕ್ಕೂ ಮೊದಲಿನ ಪರಿಸ್ಥಿತಿ ಬಗ್ಗೆ ನಾನು ಚರ್ಚಿಸಲು ಹೋಗಲ್ಲ.ಈಗಾಗಲೇ ಸೋಮವಾರಪೇಟೆ ತಾಲೂಕಿನ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಅನಿಲ್ ಎಂಬುವರನ್ನು ಕರ್ತವ್ಯಲೋಪದ ಹಿನ್ನೆಲೆ ಈ ಕ್ಷಣದಿಂದಲೇ ಅಮಾನತು ಮಾಡಿದ್ದೇನೆ. ವ್ಯವಸ್ಥೆಯನ್ನು ಸರಿಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ. ರಾಜ್ಯದಲ್ಲಿ ಇಂತಹ ಕೆಲಸ ಮಾಡುವ ವೈದ್ಯರಿಗೆ ಇದು ಎಚ್ಚರಿಕೆ ಎಂದರು.