ಕಲಬುರಗಿ: ಕಲಬುರಗಿಯಲ್ಲಿ ದಯಾನಂದ(26) ಎಂಬ ಯುವಕನ ಕೊಲೆಯಾಗಿದ್ದು, ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಆಳಂದ ತಾಲೂಕಿನ ಶುಕ್ರವಾಡಿ ಗ್ರಾಮದ ದಯಾನಂದ ಕಳೆದ ಕೆಲ ವರ್ಷಗಳಿಂದ ದುಬೈನಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದನು. ಇತ್ತೀಚೆಗಷ್ಟೇ ಗ್ರಾಮಕ್ಕೆ ಬಂದಿದ್ದ.
ಕಳೆದ ನಾಲ್ಕೈದು ತಿಂಗಳ ಹಿಂದೆ ಹುಟ್ಟೂರು ಶುಕ್ರವಾಡಿ ಗ್ರಾಮಕ್ಕೆ ದಯಾನಂದ ಹಿಂದಿರುಗಿದ್ದ. ಆದರೆ ದಯಾನಂದನ ಮನೆಯ ಸ್ಥಳದಲ್ಲಿ ಸಹೋದರ ಸಂಬಂಧಿಗಳಾದ ಹಣಮಂತ ಮತ್ತು ಸುನೀಲ್ ಸೇರಿಕೊಂಡು ಕಸ ಹಾಕುತ್ತಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಈ ಎರಡು ಕುಟುಂಬಗಳ ನಡುವೆ ಜಗಳ ಕೂಡ ನಡೆದಿತ್ತು. ಕ್ಷುಲ್ಲಕ ಕಾರಣದಿಂದ ಜಗಳ ಬೆಳೆದು ಸಹೋದರರ ನಡುವೆ ಹಗೆತನಕ್ಕೆ ಕಾರಣವಾಗಿತ್ತು.
ದಯಾನಂದ ಮರಳಿ ದುಬೈಗೆ ಹೋಗಲು ಪಾಸ್‌ಪೋರ್ಟ್ ರಿನಿವಲ್ ಮಾಡಿಸುವುದಕ್ಕಾಗಿ ಕಲಬುರಗಿಗೆ ಬಂದಿದ್ದಾನೆ. ಈ ವೇಳೆ ಸಹೋದರ ಸಂಬಂಧಿಗಳಾದ ಸುನೀಲ್, ಅನೀಲ್, ಹಣಮಂತ ಸೇರಿದಂತೆ ನಾಲ್ಕೈದು ಜನ ಸೇರಿಕೊಂಡು ದಯಾನಂದನನ್ನು ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ವಾಜಪೇಯಿ ಬಡಾವಣೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮೋದಿ ಸಂಚರಿಸಿದ ರಸ್ತೆ ಕಳಪೆ ಕಾಮಗಾರಿ: ಬಿಬಿಎಂಪಿಯಿಂದ ಗುತ್ತಿಗೆದಾರನಿಗೆ 3 ಲಕ್ಷ ರೂ. ದಂಡ