ಕಲಬುರಗಿ : ಮಹಾ ತಪಸ್ವಿ, ನಡೆದಾಡುವ ದೇವರು, ಭಕ್ತರ ಪಾಲಿನ ಭಾಗ್ಯದಾತೆ ಕಲಬುರಗಿ ಜಿಲ್ಲೆ ಯಾನಗುಂದಿಯ ಮಾತೆ ಮಾಣಿಕೇಶ್ವರಿ ಅಮ್ಮ ಸರ್ಕಾರಿ ಗೌರವ ಹಾಗೂ ವಿಭೂತಿಯೊಂದಿಗೆ ಶಿವಲಿಂಗದಲ್ಲಿ ಲೀನವಾಗಿ ಕೈಲಾಸ ಸೇರಿದ್ದಾರೆ.
ಮದ್ಯಾಹ್ನ 1 ಗಂಟೆ ಸುಮಾರಿಗೆ ಗಾಳಿಯಲ್ಲಿ ಮೂರು ಸುತ್ತ ಗುಂಡು ಹಾರಿಸಿ ಮಾತೆಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಸುಮಾರು ಎರಡು ಗಂಟೆಗಳ ಕಾಲ ಮಾತೆ ಶಿವಧ್ಯಾನ ಮಾಡುತ್ತಿದ್ದ ಆಶ್ರಮದ ಶಿಲಾ ಮಂಟಪದ ನಾಗ ಸಿಂಹಾಸನದಲ್ಲಿ ಪಾರ್ಥಿವ ಶರೀರಕ್ಕೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಲಾಯಿತು.
ಅಮ್ಮನವರ ಆಸೆಯಂತೆ ಸಿಂಹಾಸನದ ಕೆಳಭಾಗದ 12 ಅಡಿಯ ಗುಹೆಯಲ್ಲಿ ಮಾತೆ ಸ್ಥಾಪಿಸಿದ್ದ 5 ಅಡಿ ಎತ್ತರದ ಶಿವಲಿಂಗದಲ್ಲಿ ಪಾರ್ಥಿವ ಶರೀರ ಇರಿಸಿ, ಐದು ಸಾವಿರ ವಿಭೂತಿ, ಅಗತ್ಯ ಸಾಮಗ್ರಿಗಳೊಂದಿಗೆ ಹಿಂದೂ ಧರ್ಮದ ಪ್ರಕಾರ ಶಾಸ್ತ್ರೋಕ್ತವಾಗಿ ಅಂತಿಮ ವಿಧಿ-ವಿಧಾನದ ಮೂಲಕ ಮಾತೆಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.