ಕಲಬುರಗಿ: ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಂದೆಯೊಂದಿಗೆ ಜಿಮ್ಸ್ ಲಸಿಕಾ ಕೇಂದ್ರಕ್ಕೆ ಬಂದು ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಫೆಬ್ರವರಿ 8 ರಂದು ಮೊದಲ ಡೋಸ್ ಪಡೆದಿದ್ದು, ನಾಲ್ಕು ವಾರದ ನಂತರ ಇಂದು ಎರಡನೇ ಡೋಸ್ ಪಡೆದಿದ್ದೇನೆ ಎಂದು ತಿಳಿಸಿದರು.
60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ರಿಂದ 59 ವರ್ಷದೊಳಗಿನ ದೀರ್ಘ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಅದರಂತೆ ಇಂದು ನಾನು ನನ್ನ ತಂದೆಯವರಿಗೆ ಕೋವಿಡ್ ಲಸಿಕೆ ಕೊಡಿಸಿದ್ದು, ನನಗೆ ಸಂತಸ ತಂದಿದೆ ಎಂದರು.
ಕೋವಿಡ್ ಲಸಿಕೆ ಸುರಕ್ಷಿತವಾಗಿದ್ದು, ಯಾವುದೇ ಆತಂಕವಿಲ್ಲದೆ ಲಸಿಕೆ ಪಡೆಯಬಹುದಾಗಿದೆ. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ತಂದೆ-ತಾಯಿ ಹಾಗೂ ಮನೆಯಲ್ಲಿರುವ ಹಿರಿಯರಿಗೆ ಕೋವಿಡ್ ಲಸಿಕೆ ಕೊಡಿಸಲು ಮುಂದಾಗುವ ಮೂಲಕ ಮಕ್ಕಳು ತಮ್ಮ ಜವಾಬ್ದಾರಿ ಪೂರೈಸಬೇಕು ಎಂದು ಡಿಸಿ ಕರೆ ನೀಡಿದರು.
ಇದನ್ನೂ ಓದಿ: 2ನೇ ಹಂತದ ವ್ಯಾಕ್ಸಿನೇಷನ್ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ!
ಲಸಿಕೆ ಪಡೆದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರ ತಂದೆ ಜೋಷಿ(72) ಅವರು ಮಾತನಾಡಿ, ಲಸಿಕೆ ಸುರಕ್ಷಿತವಾಗಿದ್ದು 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಇದನ್ನು ಪಡೆಯುವ ಅವಶ್ಯಕತೆ ಇದೆ. ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಿರಿ ಎಂದು ಕರೆ ನೀಡಿದರು.