ಕಲಬುರಗಿ: ತಮಗೆ ಸಿಕ್ಕ ಕಡಿಮೆ ಅವಧಿಯಲ್ಲಿಯೇ ದಕ್ಷತೆ-ಪ್ರಾಮಾಣಿಕತೆ ಹಾಗೂ ಹೊಸ ಹೊಸ ಚಿಂತನೆಗಳಿಂದ ಜನಪ್ರಿಯಗೊಂಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಆಯಕ್ತ ನಳಿನ್ ಅತುಲ್ (ಐಎಎಸ್ ಅಧಿಕಾರಿ) ವರ್ಗಾವಣೆಗೊಂಡಿದ್ದಾರೆ.
ಒಂದು ವರ್ಷ ಪೂರ್ಣಗೊಳ್ಳುವ ಮುನ್ನವೇ ಅವರನ್ನು ಇಲ್ಲಿಂದ ಏಕಾಏಕಿ ವರ್ಗಾವಣೆ ಮಾಡಿರುವುದು ಶಿಕ್ಷಣ ಪ್ರೇಮಿಗಳಿಗೆ ಬೇಸರ ತರಿಸಿದೆ. ಅಕ್ಟೋಬರ್ 22, 2019ರಂದು ನಳಿನ್ ಅತುಲ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಇವರು ಮೂಲತಃ ಬಿಹಾರದವರಾಗಿದ್ದರೂ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಯ ಕನಸು ಕಂಡಿದ್ದರು. ಅಂತೆಯೇ ಶಿಕ್ಷಣ ಇಲಾಖೆಯಲ್ಲಿ ಹಲವಾರು ಪ್ರಯೋಗಾತ್ಮಕ, ನೂತನ ಯೋಜನೆಗಳನ್ನು ಜಾರಿಗೊಳಿದ್ದರು. ಹಲವು ಯೋಜನೆಗಳಿಗೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದರು. ಇನ್ನೂ ಕೆಲವು ವರ್ಷ ಅವರು ಇಲ್ಲಿಯೇ ಕಾರ್ಯನಿರ್ವಹಿಸಿದ್ದರೆ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ವಾತಾವರಣವೇ ಬದಲಾವಣೆ ಕಾಣುತ್ತಿತ್ತು ಎಂಬುದು ಅವರನ್ನು ಹತ್ತಿರದಿಂದ ಕಂಡವರ ಅಭಿಪ್ರಾಯವಾಗಿದೆ.
ಯಾವುದೇ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸುವುದಿದ್ದರೆ ದತ್ತಾಂಶಗಳನ್ನು ಮುಂದಿಟ್ಟು ಕೇಳಿ ಪಡೆಯುತ್ತಿದ್ದರು. ಇದೀಗ ಅವರನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಡೆಪ್ಯೂಟಿ ಸೆಕ್ರೆಟರಿ ಆಗಿ ವರ್ಗಾವಣೆ ಮಾಡಲಾಗಿದೆ.