ಕಲಬುರಗಿ : ರಾಜ್ಯ ಸಮಿಶ್ರ ಸರ್ಕಾರ ಉರುಳಲಿದೆ. ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಹೀಗೊಂದು ಮಾತು ಕಲಬುರಗಿ ಜಿಲ್ಲೆ ಚಿಂಚೋಳಿ ಮತ ಕ್ಷೇತ್ರದ ಇತಿಹಾಸ ನಂಬುವ ಜನ ಹೇಳುತ್ತಿದ್ದಾರೆ. ಯಾಕಂದ್ರೆ, ಚಿಂಚೋಳಿ ಕ್ಷೇತ್ರಕ್ಕೂ ರಾಜ್ಯದ ಆಡಳಿತ ಕೇಂದ್ರಕ್ಕೂ ನೇರಾ ನೇರ ಸಂಬಂಧವಿದೆ ಅನ್ನೋದಕ್ಕೆ ಒಂದು ಇತಿಹಾಸವೇ ಇದೆ.
ಚಿಂಚೋಳಿ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿ ಪಕ್ಷವೇ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುತ್ತದೆ ಎನ್ನುವ ಬಲವಾದ ನಂಬಿಕೆ ಇಲ್ಲಿನ ಜನರದಾಗಿದೆ. ಇದು ಕೇವಲ ನಂಬಿಕೆಯಲ್ಲ ಇತಿಹಾಸ ಕೆದುಕಿದಾಗ ಇದು ಸತ್ಯ ಅನ್ನೋದು ವಿಶೇಷ.ಇದೇ ಕಾರಣಕ್ಕೆ ಚಿಂಚೋಳಿಯ ಉಪ ಕದನ ಭಾರಿ ಪೈಪೋಟಿ ಏರ್ಪಟ್ಟಿತ್ತು. ಶತಾಯಗತಾಯ ತಮ್ಮ ಮಡಲಿಗೆ ಕ್ಷೇತ್ರ ಹಾಕಿಕೊಳ್ಳಲು ಎರಡು ಪಕ್ಷದವರೂ ಶತಪ್ರಯತ್ನ ಪಟ್ಟಿದ್ದರು.
![veerendra patil](https://etvbharatimages.akamaized.net/etvbharat/prod-images/3411787_patil.jpeg)
ಇದು ಪವಾಡವೋ, ಕಾಕತಾಳೀಯವೋ ಗೊತ್ತಿಲ್ಲ. 62 ವರ್ಷಗಳಿಂದ ಈ ಅಚ್ಚರಿ ಮತ್ತೆ ಸತ್ಯವಾಗಲಿದೆಯಾ? ಅಥವಾ ಇತಿಹಾಸ ಬದಲಾಗಲಿದೆಯಾ ಎಂಬ ಜಿಜ್ಞಾಸೆಯಿದೆ. 1957ರಲ್ಲಿ ಕಾಂಗ್ರೆಸ್ ಪಕ್ಷದ ವೀರೇಂದ್ರ ಪಾಟೀಲ ಜಯ ಸಾಧಿಸಿದ್ದರು. ಆಗ ಕಾಂಗ್ರೆಸ್‌ನ ಬಿಡಿ ಜತ್ತಿ ನೇತೃತ್ವದ ಸರ್ಕಾರ ಆಡಳಿತ ನಡೆಸಿತ್ತು. ಚಿಂಚೋಳಿ ವಿಧಾನಸಭೆ ಕ್ಷೇತ್ರ ಅಸ್ತಿತ್ವಕ್ಕೆ ಬಂದ 1957 ರಿಂದ 2018ರವರೆಗೆ ಚಿಂಚೋಳಿಯಲ್ಲಿ ಗೆದ್ದ ಶಾಸಕರ ಪಕ್ಷವೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದೆ.
1962 ಹಾಗೂ 1967ರಲ್ಲಿ ವೀರೇಂದ್ರ ಪಾಟೀಲ ಸತತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. ಆಗಲೂ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿತ್ತು. 1972 ಹಾಗೂ 1977ರಲ್ಲಿ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ದೇವೇಂದ್ರಪ್ಪ ಘಾಳೆಪ್ಪ ಗೆಲುವು ಸಾಧಿಸಿದ್ದರು. ಆಗ ದೇವರಾಜು ಅರಸು ಸರಕಾರ ರಚನೆಯಾಗಿತ್ತು. 1983ರ ಚುನಾವಣೆಯಲ್ಲಿ ದೇವೇಂದ್ರಪ್ಪ ಘಾಳೆಪ್ಪ ಪುನರಾಯ್ಕೆಯಾಗಿದ್ದರು. ಆ ಸಮಯದಲ್ಲಿ ಆರ್.ಗುಂಡೂರಾವ್ ಸರ್ಕಾರವಿತ್ತು. 1989ರಲ್ಲಿ ವೀರೇಂದ್ರ ಪಾಟೀಲ ಮತ್ತೆ ಆಯ್ಕೆಯಾದರು. ಆಗ ಅವರೇ ಸಿಎಂ ಆದರು.
![vyjanatha patil](https://etvbharatimages.akamaized.net/etvbharat/prod-images/3411787_vaijanath.jpeg)
1994ರಲ್ಲಿ ವೈಜನಾಥ ಪಾಟೀಲ ಜನತಾ ದಳದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ಜನತಾದಳದ ಸರ್ಕಾರ ರಚನೆಯಾಗಿ ದೇವೇಗೌಡರು ಸಿಎಂ ಆಗಿದ್ದರು. 1999ರಲ್ಲಿ ಕಾಂಗ್ರೆಸ್‌ನ ಕೈಲಾಸನಾಥ ಪಾಟೀಲ ಆಯ್ಕೆಯಾದರು. ಆಗ ಎಸ್‌ಎಂ ಕೃಷ್ಣ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿತ್ತು. 2004ರಲ್ಲಿ ವೈಜನಾಥ ಪಾಟೀಲ ಜೆಡಿಎಸ್ ಶಾಸಕರಾದರೆ ಧರಂಸಿಂಗ್ ನೇತೃತ್ವದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ, ತದನಂತರ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. 2008ರಲ್ಲಿ ಬಿಜೆಪಿಯಿಂದ ಸುನೀಲ ವಲ್ಯಾಪುರೆ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟ ಚಿಂಚೋಳಿಯಿಂದ ಚುನಾಯಿತರಾದರು. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾದರು.
2013ರಲ್ಲಿ ಡಾ. ಉಮೇಶ ಜಾಧವ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದರು. ಆಗ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. 2018ರಲ್ಲಿ ಡಾ. ಜಾಧವ ಪುನರಾಯ್ಕೆಯಾದರು. ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರಕಾರ ರಚನೆಯಾಯಿತು. 1957ರಿಂದ 2018ರ ಚುನಾವಣೆ ಅವಲೋಕಿಸಿದರೆ ಚಿಂಚೋಳಿಯಲ್ಲಿ ಗೆದ್ದ ಶಾಸಕರ ಪಕ್ಷವೇ ಆಡಳಿತಕ್ಕೆ ಬಂದಿವೆ. ಈಗ 2019 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಅವಿನಾಶ ಜಾಧವ್ ಶಾಸಕರಾಗಿದ್ದು ಬಿಜೆಪಿ ಆಡಳಿತಕ್ಕೆ ಬರಬಹುದಾ ಎಂಬ ಪ್ರಶ್ನೆಗಳು ಜನರಲ್ಲಿ ಚರ್ಚೆಗಳಾಗುತ್ತಿವೆ.
![Avinash jadav](https://etvbharatimages.akamaized.net/etvbharat/prod-images/3411787_avinash.jpg)
ಚರ್ಚೆಗೆ ಪೂರಕ ಎಂಬಂತೆ ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರದಲ್ಲಿ ಭಿನ್ನಾಪ್ರಾಯಗಳು ಕಂಡುಬರುತ್ತಿವೆ. ಹೀಗಾಗಿ ಚಿಂಚೋಳಿಯಲ್ಲಿ ಬಿಜೆಪಿ ಶಾಸಕರಿದ್ದು, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಅನ್ನೋದು ಸ್ಥಳೀಯ ಬಿಜೆಪಿಗರ ವಾದವಾಗಿದೆ.
ಚಿಂಚೋಳಿಗೆ ಹಾಗೂ ರಾಜ್ಯ ರಾಜಕಾರಣಕ್ಕೆ ಇರುವ ನಂಟು ಈ ಬಾರಿಯು ಸತ್ಯವಾಗಿ ಇತಿಹಾಸ ಮುಂದುವರೆಯುತ್ತಾ ಅಥವಾ ಸರ್ಕಾರ ಬದಲಾಗದೆ ಹೊಸ ಇತಿಹಾಸಕ್ಕೆ ನಾಂದಿಯಾಗುತ್ತಾ ಗೊತ್ತಿಲ್ಲ. ರಾಜ್ಯ ಸಮ್ಮಿಶ್ರ ಸರಕಾರದ ಅಳಿವು-ಉಳಿವಿನ ಬಗ್ಗೆ ಚಿಂಚೋಳಿ ಕ್ಷೇತ್ರದಲ್ಲಂತೂ ವಿಶಿಷ್ಟ ಚರ್ಚೆಗಳು ಮಾತ್ರ ನಡೆದಿವೆ.