ಕಲಬುರಗಿ: ಶಾಸಕ ಉಮೇಶ್ ಜಾಧವ್ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ ನಂತರ ಬಿಜೆಪಿ ಹಿರಿಯ ಮುಖಂಡ ಸುಭಾಷ್ ರಾಠೋಡ್ ಕಾಂಗ್ರೆಸ್ ಸೇರ್ಪಡೆಗೊಂಡರು. ಈ ಮೂಲಕ ಕಾಂಗ್ರೆಸ್ ಎರಡನೇ ಬಾರಿಗೆ ಶಕ್ತಿ ಪ್ರದರ್ಶನ ಮಾಡಿತು.
ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾದ ಬೆನ್ನ ಹಿಂದೆ ಹಲವಾರು ಬಿಜೆಪಿ ಮುಖಂಡರು ಪಕ್ಷದಿಂದ ಹೊರ ಬಂದಿದ್ದಾರೆ. ಚಿಂಚೋಳಿ ಪಟ್ಟಣದಲ್ಲಿ ಕಾಂಗ್ರೆಸ್ ಸಭೆ ಮಾಡುವ ಮೂಲಕ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡಿತು. ಬಿಜೆಪಿ ಹಿರಿಯ ಮುಖಂಡ ಸುಭಾಷ್ ರಾಠೋಡ್ ಸೇರಿ ಹಲವು ಮುಖಂಡರು ಮತ್ತು ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡರು.
ಚಿಂಚೋಳಿ ಪಟ್ಟಣ್ಣದ ಹೆಲಿಪ್ಯಾಡ್ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
ಬಡವರ ಬಗ್ಗೆ ನಿಮ್ಮ ಹೃದಯದಲ್ಲಿ ಜಾಗವೇ ಇಲ್ಲವೆಂದರೆ ನೀವೇನು ಸಾಧಿಸಲಾಗುವುದಿಲ್ಲ. ನನ್ನ ಭಾಷಣ ಇದ್ದಾಗ ಮಾತ್ರ ಮೋದಿ ಸಂಸತ್ನಲ್ಲಿ ಉತ್ತರ ನೀಡುತ್ತಿದ್ದರು. ಅದು ಸಹ ತಮ್ಮ ಮೂಗಿನ ನೇರಕ್ಕೆ ಹೇಳಿ ಹೋಗುತ್ತಿದ್ದರು. ಆದರೆ, ಅವರು ಸಂಸತ್ನಲ್ಲಿ ಮಾತನಾಡಿರುವುದಕ್ಕಿಂತ ಹೊರಗೆ ಮಾತನಾಡಿದ್ದೆ ಹೆಚ್ಚು ಎಂದರು.
ಸ್ವತಃ ತನ್ನನ್ನು ಬೆಳೆಸಿದ ಎಲ್ ಕೆ ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ಜೋಶಿ, ಮೊದಲಾದ ನಾಯಕರನ್ನು ಮೋದಿ ತುಳಿದಿದ್ದಾರೆ. ಈಗ ನಮ್ಮ ಮೇಲೆ ಹಗೆತನ ಸಾಧಿಸುತ್ತಿದ್ದಾರೆ. ಸಿಬಿಐ , ಐಟಿ, ಇಡಿ ದಾಳಿಗಳ ಮೂಲಕ ಪ್ರತಿಪಕ್ಷಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಇಂಥವರು ನಮ್ಮ ದೇಶದ ಅಭಿವೃದ್ಧಿಗೆ ಹಿಡಿದ ದೊಡ್ಡ ಗ್ರಹಣ, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.
ಈ ವೇಳೆ ಸುಭಾಷ್ ರಾಠೋಡ್ ಮಾತನಾಡಿ, ಜಾತಿ ಆಧಾರದ ಮೇಲೆ ವ್ಯಕ್ತಿಯನ್ನು ಮುಗಿಸಲು ಬಿಜೆಪಿ ಹೊರಟಿತ್ತು. ಅದರ ವಿರುದ್ಧ ಸಿಡಿದೆದ್ದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.
ಇನ್ನು ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ, ಶಾಸಕ ಬಿ ನಾರಾಯಣ ರಾವ್, ಮಾಜಿ ಸಚಿವ ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.