ಕಲಬುರಗಿ: ಹಾಡಹಗಲೇ ನಡೆದ ವಿದ್ಯಾರ್ಥಿ ಮೊಹಮ್ಮದ್ ಮುದ್ದಸೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿ ಸಯ್ಯದ್ ಯಾಸಿನ್(19), ಛೋಟಾ ರೋಜಾ ಬಡಾವಣೆಯ ಶೇಕ್ ಅಮೀರ್ (21), ಹಾಗೂ ಮೊಹಮ್ಮದ್ ಕಮ್ರಾನ್ (22) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಕೊಲೆಯಾದ ಮುದ್ದಸೀರ್ ದೊಡಪ್ಪನ ಮಗಳನ್ನು ಆರೋಪಿ ಶೇಕ್ ಅಮೀರ್ ಪ್ರೀತಿಸುತ್ತಿದ್ದ. ಮದುವೆ ಆಗುವುದಾಗಿಯೂ ಎಲ್ಲಡೆ ಹೇಳಿಕೊಂಡು ಓಡಾಡುತ್ತಿದ್ದ. ಇದನ್ನು ಗಮನಿಸಿದ ಮುದ್ದಸೀರ್ ಈ ಹಿಂದೆ ಅಮೀರ್ಗೆ ತಿಳಿಹೇಳಿ ಎಚ್ಚರಿಕೆ ಕೊಟ್ಟಿದ್ದ. ಇದರಿಂದ ಕುಪಿತಗೊಂಡಿದ್ದ ಅಮೀರ್ ತನ್ನ ಸ್ನೇಹಿತರ ಜತೆ ಸೇರಿ ಮುದ್ದಸೀರ್ ಕೊಲೆಗೆ ಹೊಂಚು ಹಾಕಿ ಮಂಗಳವಾರ(ನ.15) ಮಧ್ಯಾಹ್ನ 4 ಗಂಟೆಗೆ ಛೋಟಾ ರೋಜಾ ಬಡಾವಣೆಯ ಬೌವುಲಿಗಲ್ಲಿಯ ಅಮಿರ್ ಗುಲ್ಶನ್ ಫಂಕ್ಷನ್ ಹಾಲ್ ಹತ್ತಿರ ಮಾರಾಕಾಸ್ತ್ರದಿಂದ ದಾಳಿ ನಡೆಸಿ ಪರಾರಿಯಾಗಿದ್ದರು.
ತೀವ್ರ ಗಾಯಗೊಂಡಿದ್ದ ಮುದ್ದಸೀರನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಿಸದೇ ಅಂದು ಮಧ್ಯರಾತ್ರಿ ಮೃತಪಟ್ಟಿದ್ದನು. ಆರೋಪಿಗಳು ಹುಮ್ನಾಬಾದ್ ಮಾರ್ಗವಾಗಿ ಹೈದರಾಬಾದ್ ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಮೂವರನ್ನು ಕಲಬುರಗಿಯ ಹುಮ್ನಾಬಾದ್ ರಿಂಗ್ ರಸ್ತೆ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಹಾಡಹಗಲೇ ವಿದ್ಯಾರ್ಥಿ ಬರ್ಬರ ಹತ್ಯೆ: ಬೆಚ್ಚಿಬಿದ್ದ ಕಲಬುರಗಿ ಜನರು