ಕಲಬುರಗಿ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಕುರಿತು ಚರ್ಚಿಸಿ ವರದಿ ಜಾರಿಗೆ ಒತ್ತಾಯಿಸಿ ಮಾದಿಗ ಸಮನ್ವಯ ಸಮಿತಿ ವತಿಯಿಂದ ಪತ್ರ ಚಳವಳಿ ನಡೆಸಲಾಯಿತು.
ಮಾದಿಗ ಸಮನ್ವಯ ಸಮಿತಿ ನೇತೃತ್ವದಲ್ಲಿ ಮಹಿಳೆಯರು, ಯುವಕರು ಹಾಗೂ ಸಮಾಜದ ಮುಖಂಡರು ಪಟ್ಟಣದ ಜಾಂಭವೀರ ಕಾಲೋನಿಯಲ್ಲಿ ಪತ್ರ ಚಳವಳಿಗೆ ಚಾಲನೆ ನೀಡಿದರು.
ಈ ವೇಳೆ ವರದಿ ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ರವಾನಿಸಲಾಯಿತು. ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಆದ್ರೂ ಸಹ ಆಡಳಿತ ಪಕ್ಷಗಳು ಸಮುದಾಯದ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.