ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಪ್ರಕರಣದ ಕಿಂಗ್ ಪಿನ್ ಆರ್.ಡಿ ಪಾಟೀಲ್ ಸೇರಿ ಮೂರು ಜನ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಕಲಬುರಗಿ 2 ನೇ ಜೆಎಮ್ಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸ್ಮಿತಾ ನಾಗಲಾಪುರ ಅವರು ಆರ್.ಡಿ ಪಾಟೀಲ್ ಹಾಗೂ ಮತ್ತಿಬ್ಬರು ಆರೋಪಿಗಳಾದ ಸಂತೋಷ್ ಹಾಗೂ ಸಲೀಂ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಆರೋಪಿಗಳಾದ ಆರ್.ಡಿ ಪಾಟೀಲ್, ಸಂತೋಷ್ ಹಾಗೂ ಸಲೀಂ ಮೂವರನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರ ಮುಂದೆ ಪೊಲೀಸರು ಮನವಿ ಮಾಡಿದ್ದರು. ಆದರೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡದೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರಾದ ಸ್ಮೀತಾ ನಾಗಲಾಪುರ ಆದೇಶಿಸಿದ್ದಾರೆ. ಸದ್ಯ ಮೂವರು ಆರೋಪಿಗಳು ಜೈಲು ಪಾಲಾಗಿದ್ದಾರೆ.
ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಅಶೋಕನಗರ ಠಾಣಾ ಪೊಲೀಸರು ಪ್ರಮುಖ ಆರೋಪಿ ಆರ್.ಡಿ ಪಾಟೀಲ್ರನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದರು. ಬಳಿಕ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಆರ್.ಡಿ ಪಾಟೀಲ್ರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.
ಮತ್ತೋರ್ವ ಆರೋಪಿ ಬಂಧನ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಫ್ಡಿಎ ಪರೀಕ್ಷೆ ಅಕ್ರಮ ಪ್ರಕರಣ ಕುರಿತಂತೆ ಮತ್ತೊಬ್ಬ ಆರೋಪಿಯನ್ನು ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಶಾಲೆಯ ದೈಹಿಕ ಶಿಕ್ಷಕ ಸಂತೋಷ್ ಗುತ್ತೇದಾರ್ ಬಂಧಿತ ಆರೋಪಿ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗೆ ಉತ್ತರಗಳನ್ನು ನೀಡಿದ್ದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.
ಸಂತೋಷ್ ಗುತ್ತೇದಾರ್ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ನ ಬೆಂಬಲಿಗನಾಗಿದ್ದು, ಪ್ರಶ್ನೆ ಪತ್ರಿಕೆ ಫೋಟೋ ಕಾಪಿ ತೆಗೆದುಹಾಕಲು ಆರ್.ಡಿ ಪಾಟೀಲ್, ಸಂತೋಷ್ನನ್ನು ಅಫಜಲಪುರ ಪರೀಕ್ಷಾ ಕೇಂದ್ರದಲ್ಲಿ ನೇಮಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಅಪಾರ್ಟ್ಮೆಂಟ್ನಿಂದ ಪರಾರಿಯಾಗಿದ್ದ ಆರೋಪಿ : ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಆರ್‌ಡಿ ಪಾಟೀಲ್, ನವೆಂಬರ್ 6 ರಂದು ನಗರದ ವರ್ಧಾ ಲೇಔಟ್‌ನ ಮಹಾಲಕ್ಷ್ಮಿ ಅಪಾರ್ಟ್ಮೆಂಟ್ ಹಿಂಭಾಗದ ಕಾಂಪೌಂಡ್ ಹಾರಿ ಪರಾರಿಯಾಗಿದ್ದರು. ಬಳಿಕ ಕಲಬುರಗಿ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ತಲೆಮರೆಸಿಕೊಂಡಿದ್ದರು. ಕೊನೆಗೂ ಪೊಲೀಸರು 7 ತಂಡ ರಚನೆ ಮಾಡಿ ಶುಕ್ರವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಆರೋಪಿ ಆರ್.ಡಿ ಪಾಟೀಲ್ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಮಾಡಿ ನಕಲು ಮಾಡಲು ಅಭ್ಯರ್ಥಿಗಳಿಗೆ ಸಹಕರಿಸಿದ ಆರೋಪ ಇದೆ. ಈ ಸಂಬಂಧ ತನಿಖೆ ಮುಂದುವರೆದಿದೆ.
ಇದನ್ನೂ ಓದಿ :ನಿಗಮ ಮಂಡಳಿ ಪರೀಕ್ಷಾ ಅಕ್ರಮದ ನೈತಿಕ ಜವಾಬ್ದಾರಿ ಹೊತ್ತು ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ: ಅಶ್ವತ್ಥನಾರಾಯಣ್ ಆಗ್ರಹ