ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸದ್ಯ 10 ಸಾವಿರ ಜನರ ಮಾದರಿಗಳನ್ನು ಪರೀಕ್ಷೆಗೆ ಸಂಗ್ರಹಿಸಲಾಗಿದ್ದು, ವರದಿ ಏನಾಗಲಿದೆ ಎಂಬ ಆತಂಕದಲ್ಲಿ ಜಿಲ್ಲೆಯ ಜನರಿದ್ದಾರೆ.
ದೇಶದಲ್ಲಿಯೇ ಕೊರೊನಾಗೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದ್ದು, ಬಳಿಕ ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿತ್ತು. ಆದ್ರೆ ದೆಹಲಿಯ ತಬ್ಲಿಘಿ ಹಾಗೂ ನಂತರದ ಮಹಾರಾಷ್ಟ್ರದ ಕಂಟಕದಿಂದ 190 ಜನರಿಗೆ ಸೋಂಕು ತಗುಲಿದ್ದು, 7 ಜನರು ಮೃತಪಟ್ಟಿದ್ದಾರೆ. ಕೊರೊನಾ ಜೊತೆ ಹೋರಾಡಿ 75 ಜನ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದೀಗ 10 ಸಾವಿರ ಜನರ ಸ್ಯಾಂಪಲ್ ವರದಿ ಬರುವುದು ಬಾಕಿ ಇದೆ. ಮಹಾರಾಷ್ಟ್ರದಿಂದ ಮರಳಿದ್ದ ಸುಮಾರು 30 ಸಾವಿರ ವಲಸೆ ಕಾರ್ಮಿಕರ ಮಾದರಿಯನ್ನು ಪಡೆದು ಪರೀಕ್ಷೆ ಮಾಡಬೇಕಾದ ವಿಷಯ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.
ಇಲ್ಲಿವರೆಗೆ ಜಿಲ್ಲೆಯಲ್ಲಿ ಸುಮಾರು 28 ಸಾವಿರ ಜನರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 10 ಸಾವಿರ ವರದಿ ಬರುವದು ಬಾಕಿ ಇದ್ರೆ, ಇನ್ನುಳಿದ 18 ಸಾವಿರ ಜನರ ವರದಿಯಲ್ಲಿ 190 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇತ್ತೀಚಿನ ದಿನಗಳ ಕೊರೊನಾ ವರದಿ ಗಮನಿಸಿದ್ರೆ ಮಹಾರಾಷ್ಟ್ರದಿಂದ ಬಂದ ವಲಸಿಗರು ಹಾಗೂ ಅವರ ಸಂಪರ್ಕದಲ್ಲಿ ಇದ್ದವರಿಗೆ ಕೊರೊನಾ ಸೋಂಕು ತಗುಲುತ್ತಿರುವುದು ದೃಢಪಡುತ್ತಿದೆ. ಸ್ಥಳೀಯರಲ್ಲಿ ಸೋಂಕು ಕಾಣದಿರುವುದು ಕೊಂಚ ಸಮಾಧಾನದ ವಿಷಯವಾಗಿದೆ.