ಕಲಬುರಗಿ: ರಸ್ತೆ ಬದಿ ಕೆಟ್ಟು ನಿಂತಿದ್ದ ವಾಹನ ದುರಸ್ತಿ ವೇಳೆ ಹಿಂದಿನಿಂದ ಟ್ಯಾಂಕರ್ ಡಿಕ್ಕಿ ಹೊಡೆದು, ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಸೇಡಂ ತಾಲೂಕಿನ ಇವಣಿ ಗ್ರಾಮದ ಬಳಿ ಗುರುವಾರ ಸಂಭವಿಸಿದೆ.
ಬೀದರ್ ಹಾಗೂ ಹೈದರಾಬಾದ್ ಮೂಲದ ವಿಠಲ್, ಮಂಗ್ಲಿ ಹಾಗೂ ಪ್ರಶಾಂತ್ ಮೃತರು. ಕಲಬುರಗಿಯಿಂದ ಸೇಡಂ ಮಾರ್ಗವಾಗಿ ಹೈದರಾಬಾದ್ಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಇವಣಿ ಗ್ರಾಮದ ಸಮೀಪ ಇವರ ವಾಹನ ಕೆಟ್ಟು ನಿಂತಿತ್ತು. ಹೀಗಾಗಿ ರಸ್ತೆ ಬದಿ ನಿಲ್ಲಿಸಿ ರಿಪೇರಿ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ಸಿಮೆಂಟ್ ಟ್ಯಾಂಕರ್ ಇವರಿದ್ದ ವಾಹನಕ್ಕೆ ಗುದ್ದಿದೆ. ಈ ಕುರಿತು ಮಾಡಬೂಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಪ್ರತ್ಯೇಕ ಪ್ರಕರಣಗಳು- ಮಹಿಳೆ ಕೊಲೆ, ಇಬ್ಬರು ಸೆರೆ: ಕಲಬುರಗಿಯ ಜೆ.ಆರ್. ನಗರದಲ್ಲಿ ಇತ್ತೀಚೆಗೆ ದೇವರ ಹೆಸರಲ್ಲಿ ಭವಿಷ್ಯ ಹೇಳುತ್ತಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಗರದ ಬಾಳೆ ಲೇಔಟ್‍ನ ಶರ್ಪೋದ್ದಿನ್ ಅಲಿಯಾಸ್ ಶರ್ಪೋದ್ದಿನ್ ಗೌಳಿ (54) ಮತ್ತು ಬಸವರಾಜ ಬಿದನೂರ (34) ಎಂಬವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಆಯುಧ ಜಪ್ತಿ ಮಾಡಿದ್ದಾರೆ.
ವಿವರ: ಜೆ.ಆರ್.ನಗರದ ರತ್ನಾಬಾಯಿ ಬಿದನೂರ ಭವಿಷ್ಯ ಹೇಳುತ್ತಿದ್ದು, ಆರೋಪಿಗಳು ರುಬ್ಬುಗಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು. ರತ್ನಬಾಯಿ ಅವರ ಪುತ್ರಿ ಅನುಸುಬಾಯಿ ತಿವಾರಿ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತ ಚೇತನ್ ಆರ್, ಡಿಸಿಪಿ ಕನಿಕಾ ಸಿಕ್ರಿವಾಲ್, ಕಲಬುರಗಿ ದಕ್ಷಿಣ ಉಪ-ವಿಭಾಗದ ಎಸಿಪಿ ಭೂತೆಗೌಡ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆ ಪಿಐ ಕುಬೇರ ಎಸ್.ರಾಯಮಾನೆ ನೇತೃತ್ವದಲ್ಲಿ ಎಎಸ್‍ಐ ಮಲ್ಲಿಕಾರ್ಜುನ ಜಾನೆ, ಸಿಬ್ಬಂದಿಗಳಾದ ಸಿಕ್ರೇಶ್ವರ, ಉಮೇಶ, ಮುಜಾಹಿದ್ ಕೊತ್ವಾಲ್, ಅರೇಶ, ಆತ್ಮಕುಮಾರ ಮತ್ತು ಕರಣಕುಮಾರ ಅವರು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ವಿಚಾರಣೆಯ ವೇಳೆ, ಹಣ ಕೊಡುವುದಾಗಿ ಹೇಳಿ ಸುಳ್ಳು ಭರವಸೆ ನೀಡಿದ್ದು ಮತ್ತು ಬೈಗುಳದಿಂದ ಬೇಸತ್ತು ಮಹಿಳೆಯನ್ನು ಕೊಲೆ ಮಾಡಿದ್ದಾಗಿ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅನುಮಾನದಿಂದ ಹೆಂಡತಿಗೆ ಚಾಕು ಇರಿದು ಆತ್ಮಹತ್ಯೆಗೆ ಶರಣಾದ ಗಂಡ