ಕಲಬುರಗಿ: ರಾಜ್ಯದ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ 750 ಹುದ್ದೆಗಳಿಗೆ ಕೆಇಎ ಇಂದು ನಡೆಸಿದ ಪರಿಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಮುಖಾಂತರ ಅಕ್ರಮ ಎಸಗಿರುವ ಪ್ರಕರಣದಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಮಾಸ್ಟರ್ ಮೈಂಡ್ ಆರ್. ಡಿ. ಪಾಟೀಲ್ ಹೆಸರು ಮತ್ತೆ ಮುಂಚೂಣಿಗೆ ಬಂದಿದೆ.
ಹೌದು, ಕರ್ನಾಟಕ ಪರಿಕ್ಷಾ ಪ್ರಾಧಿಕಾರದಿಂದ ಇಂದು ವಿವಿಧ ನಿಗಮ ಮಂಡಳಿಗಳ ಖಾಳಿ ಇರುವ ಹುದ್ದೆಗಳ ನೇಮಕಾತಿಗೆ ಕನ್ನಡ ಇಂಗ್ಲಿಷ್ ಕಮ್ಯುನಿಕೇಶನ್ ಪರೀಕ್ಷೆ ನಡೆಸಿದೆ. ಕಲಬುರಗಿ ನಗರದ ಶರಣಬಸವೇಶ್ವರ ವಿವಿ ಪರೀಕ್ಷಾ ಕೇಂದ್ರದಲ್ಲಿ ಹಾಜರಾದ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಅಭ್ಯರ್ಥಿ ತ್ರಿಮೂರ್ತಿ ಎಂಬಾತ ಬ್ಲೂಟೂತ್ ಡಿವೈಸ್ ಕೀ ಆನ್ಸರ್ ತಿಳಿದುಕೊಂಡು ಪರೀಕ್ಷೆ ಬರೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇದೀಗ ತ್ರಿಮೂರ್ತಿ ಹೇಳಿಕೆ ಆಧಾರದಲ್ಲಿ ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರ್.ಡಿ. ಪಾಟೀಲ್ ಮೂರನೇ ಆರೋಪಿಯಾಗಿದ್ದಾರೆ.
ಮೊದಲನೇ ಆರೋಪಿಯಾಗಿ ತ್ರಿಮೂರ್ತಿ ತಳವಾರ (26) ಎರಡನೇ ಆರೋಪಿಯಾಗಿ ಇವರ ಸಹೋದರ ಅಂಬ್ರೀಷ್ ಹಾಗೂ ಮೂರನೇ ಆರೋಪಿಯಾಗಿ ಆರ್. ಡಿ. ಪಾಟೀಲ್ ಹೆಸರು ನಮೂದಾಗಿದೆ.
ಎಫ್ಐಆರ್ನಲ್ಲಿ ಏನಿದೆ? : ಶರಣಬಸವೇಶ್ವರ ವಿವಿಯ ಪರೀಕ್ಷಾ ಕೇಂದ್ರದ 2H8ರ ರೂಮ್ ಸಂಖ್ಯೆ 38 ರಲ್ಲಿ ಆರೋಪಿ ತ್ರಿಮೂರ್ತಿ ಪರೀಕ್ಷೆ ಎದುರಿಸುತ್ತಿದ್ದ, ಈ ಕೊಠಡಿಯಲ್ಲಿ ಒಟ್ಟು 24 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. ಇದರಲ್ಲಿ ಮೂವರು ಗೈರಾಗಿದ್ದು, ಆರೋಪಿ ತ್ರಿಮೂರ್ತಿ ಸೇರಿ ಒಟ್ಟು 21 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಅಕ್ರಮದ ಸುಳಿವು ಅರಿತ ಕೆಇಎ ಡೆಪ್ಯುಟಿ ಡೈರೆಕ್ಟರ್ ಹಾಗೂ ಪೊಲೀಸರು ಪರೀಕ್ಷಾ ಕೋಣೆಗೆ ಆಗಮಿಸಿ ತ್ರಿಮೂರ್ತಿಯನ್ನು ಹೊರಗೆ ಕರೆದು ರೂಮಿನ ಎದುರುಗಡೆ ವಿಚಾರಿಸಿದಾಗ ತನ್ನ ಬಳಿ ಬ್ಲೂಟೂತ್ ಡಿವೈಸ್ ಇರುವ ಬಗ್ಗೆ ತಿಳಿಸಿ ತನ್ನ ಎಡ ಕಂಕುಳದಿಂದ ಒಂದು ಬ್ಲೂಟೂತ್ ಡಿವೈಸ್ ತೆಗೆದುಕೊಟ್ಟಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ಇನ್ನೂ ಏನಾದರೂ ಇರುವ ಬಗ್ಗೆ ಕೇಳಿದಾಗ ಕಿವಿಯಲ್ಲಿ ಡಿವೈಸ್ ಇದೆ ಎಂದು ಹೇಳಿದ್ದಾನೆ. ನಿನಗೆ ಉತ್ತರ ಯಾರು ಹೇಳುತ್ತಿದ್ದಾರೆ ಎಂದು ಕೇಳಿದಾಗ ನನ್ನ ತಮ್ಮ ಅಂಬ್ರೀಷ್ ಹೊರಗಡೆ ಕಾರಿನಲ್ಲಿ ಕುಳಿತು ಉತ್ತರ ಹೇಳುತ್ತಿದ್ದಾನೆ. ನನ್ನ ತಮ್ಮನಿಗೆ ಆರ್.ಡಿ. ಪಾಟೀಲ್ ಹಾಗೂ ಆತನ ಸಂಗಡಿಗರು ಲಿಖಿತ ಪರೀಕ್ಷೆ ಬರೆಯಲು ಸಹಾಯ ಮಾಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆಂದು ದೂರಿನಲ್ಲಿ ವಿವರಿಸಲಾಗಿದೆ.
ಸರ್ಕಾರಿ ನೌಕರಿ ಪಡೆಯಲು ಬ್ಲೂಟೂತ್ ಡಿವೈಸ್ ಬಳಸಿ ಲಿಖಿತ ಪರೀಕ್ಷೆ ಬರೆದವರ ಮೇಲೆ ಹಾಗೂ ಅಕ್ರಮಕ್ಕೆ ಸಹಕರಿಸಿದವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ರೂಮ್ ಸೂಪರ್ವೈಸರ್ ದೂರಿನಲ್ಲಿ ಕೋರಿದ್ದು, ದೂರಿನ ಆಧಾರದಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಶೋಕ್ ನಗರ ಠಾಣೆಯಲ್ಲಿ ಕಲಂ 420,120 (ಬಿ), 109, 114, 36, 37 ಜೊತೆಗೆ 34 ಐಪಿಸಿ ಮತ್ತು 66 (ಡಿ) ಐಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕಲಬುರಗಿಯಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳು.. ಓರ್ವನ ಬಂಧನ, ಆರು ಮಂದಿ ವಶಕ್ಕೆ