ಕಲಬುರಗಿ: ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವ ಆರೋಪದಲ್ಲಿ ಜೈಲು ಸೇರಿರುವ ಆರೋಪಿ ಆರ್.ಡಿ ಪಾಟೀಲ್ ಅಫಜಲಪುರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಪೊಲೀಸ್ ವಾಹನದಲ್ಲಿ ಆಗಮಿಸಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ತಮ್ಮ ಹಾಗೂ ತಮ್ಮ ಮಡದಿ ಹೆಸರಿನಲ್ಲಿ ಸುಮಾರು 6.50 ಕೋಟಿ ಆಸ್ತಿ ಇರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಘೋಷಿಸಿದ್ದಾರೆ.
ಮೂರು ನಾಮಪತ್ರ: ಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ಸೋಮವಾರ ಅಫಜಲಪುರ ತಹಶೀಲ್ ಕಾರ್ಯಾಲಯಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಪೊಲೀಸ್ ವಾಹನದಲ್ಲಿ ಆಗಮಿಸಿದ ಆರ್.ಡಿ ಪಾಟೀಲ್ ಒಂದೇ ದಿನ ಸಮಾಜವಾದಿ ಪಕ್ಷದಿಂದ ಎರಡು ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಒಂದು ಒಟ್ಟು ಮೂರು ನಾಮಪತ್ರ ಸಲ್ಲಿಸಿದ್ದಾರೆ.
ಆಸ್ತಿ ವಿವರ: ಮೂಲತಃ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಆರ್.ಡಿ ಪಾಟೀಲ್ 39 ವರ್ಷ ವಯಸ್ಸಿನವರಾಗಿದ್ದಾರೆ. ಗುಲ್ಬರ್ಗಾ ವಿಶ್ವ ವಿದ್ಯಾಲಯದಿಂದ ಆರ್ಟ್ಸ್ ಪದವಿ ಪಡೆದಿದ್ದಾಗಿ ಚುನಾವಣೆ ಆಯೋಗಕ್ಕೆ ತಿಳಿಸಿದ್ದಾರೆ. ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂ ಬಳಕೆ ಮಾಡುತ್ತಿರುವುದಾಗಿ ಹೇಳಿದ ಆರ್ಡಿಪಿ, ತಮ್ಮ ಬಳಿ ವಾಹನ ಇಲ್ಲ, ಬ್ಯಾಂಕ್ ಗಳಲ್ಲಿ ಸಾಲ ಇಲ್ಲ, ತಮ್ಮ ಹೆಸರಿನಲ್ಲಿ 3.69 ಕೋಟಿ ಮೌಲ್ಯದ ಚರಾಸ್ತಿ ಹಾಗೂ 1.80 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 5.49 ಕೋಟಿ ಆಸ್ತಿ ಇದೆ. ಪತ್ನಿ ಹೆಸರಿನಲ್ಲಿ 89 ಲಕ್ಷ ಮೌಲ್ಯದ ಚರಾಸ್ತಿ, 20 ಲಕ್ಷ ಮೌಲ್ಯದ ಸ್ಥಿರಾಸ್ತಿ ಸೇರಿ 1.09 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಚುನಾವಣಾ ಆಯೋಗಕ್ಕೆ ನೀಡಿದ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಆರ್.ಡಿ.ಪಾಟೀಲ್ ಒಬ್ಬ ಬುದ್ಧಿವಂತ ಕ್ರಿಮಿನಲ್, ಆತನ ವಿಚಾರಣೆ ನಡೆಯತ್ತಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಆರ್‌ಡಿ ಪಾಟೀಲ್ ಕೈಯಲ್ಲಿ 10 ಸಾವಿರ ರೂ. ನಗದು, ಕಲಬುರಗಿ ಸೂಪರ್ ಮಾರ್ಕೆಟ್ ಎಕ್ಸಿಸ್ ಬ್ಯಾಂಕ್‌ನಲ್ಲಿ 42 ಲಕ್ಷ ಡಿಪಾಸಿಟ್, 1.45 ಕೋಟಿ ಮೌಲ್ಯದ IRCTS ಷೇರುಗಳು, 13.40 ಲಕ್ಷ ಮೌಲ್ಯದ ಟಾಟಾ ಸ್ಟೀಲ್ ಷೇರುಗಳು, 18.21 ಲಕ್ಷ ಮೌಲ್ಯದ TCS ಷೇರುಗಳು, 20 ಲಕ್ಷ ಮೌಲ್ಯದ ಮ್ಯೂಚುವಲ್ ಫಂಡ್‌ನಲ್ಲಿ ಹಣ ತೊಡಗಿಸಿದ್ದಾರೆ.
LIC, ಇಂಡಿಯನ್ ಫಸ್ಟ್ ಪಾಲಿಸಿ ಸೇರಿದಂತೆ 1.73 ಕೋಟಿ ಇನ್ವೆಸ್ಟ್ಮೆಂಟ್ ಸೇವಿಂಗ್ಸ್ ಪಾಲಿಸಿಗಳು, 20 ಗ್ರಾಂ ಚಿನ್ನಾಭರಣ, ಸೊನ್ನ ಗ್ರಾಮದಲ್ಲಿ 3.26 ಎಕರೆ ಜಮೀನು, ಅಕ್ಕಮಹಾದೇವಿ ಕಾಲೋನಿಯಲ್ಲಿ ನಿವೇಶನ ಹಾಗೂ ಮನೆಯನ್ನು ಹೊಂದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿ 1011 ಗ್ರಾಂ ಚಿನ್ನಾಭರಣ, ಹಣ ಹೂಡಿಕೆ, ಸೊನ್ನ ಗ್ರಾಮದಲ್ಲಿ 2.23 ಎಕರೆ ಜಮೀನು ಇತ್ಯಾದಿ ಇರುವುದಾಗಿ ವಿವರಿಸಿದ್ದಾರೆ.
ಇವರ ಮೇಲೆ ಪಿಎಸ್ಐ ಪರೀಕ್ಷೆ ಅಕ್ರಮ ಸಂಬಂಧಿತ ಹಾಗೂ ಕೌಟುಂಬಿಕ ಆಸ್ತಿ ಕಲಹ ಪ್ರಕರಣ ಒಳಗೊಂಡಂತೆ ತುಮಕೂರು, ಧಾರವಾಡ, ಬೆಂಗಳೂರು, ಕಲಬುರಗಿ, ಯಾದಗಿರಿ, ಅಫಜಲಪುರ ನ್ಯಾಯಾಲಯಗಳಲ್ಲಿ 14 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ಇದನ್ನೂ ಓದಿ: ಪಿಎಸ್‌ಐ ಅಕ್ರಮ : 'ಕೈ' ಮುಖಂಡನ ಸೋದರನ ಬಂಧನ.. ಮಹಾಂತೇಶ್ಗೆ ಕರೆ ಮಾಡಿ ಬಲೆಗೆ ಬಿದ್ದ ಆರ್ ಡಿ ಪಾಟೀಲ್!