ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಬಗೆದಷ್ಟು ಆಳಕ್ಕೆ ಹೋಗ್ತಿದೆ. ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದೆ. ಇನ್ನೂ ಅನೇಕರ ಬಂಧನ ಮಾಡುವುದು ಪಕ್ಕಾ ಆಗಿದೆ. ಆದ್ರೆ, ಬಂಧಿತರಲ್ಲಿ ಓರ್ವ ಎಬಿವಿಪಿ ಮುಖಂಡ ಅನ್ನೋದು ವಿಪರ್ಯಾಸ. ಅನ್ಯಾಯವಾದಾಗ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡಿ ನ್ಯಾಯ ಕೊಡಿಸುವ ಹೊಣೆ ಹೊತ್ತವನೇ, ಇದೀಗ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾನೆ.
ಜಿಲ್ಲೆಯ ಎಬಿವಿಪಿ ಮುಖಂಡ ಹಾಲ್ ಸುಲ್ತಾನಪುರದ ಅರುಣಕುಮಾರ ಪಾಟೀಲ್ ಬಂಧನ ಮಾಡಲಾಗಿದೆ. ಈತ ಬಿಎಡ್ ಮುಗಿಸಿ ಕಲಬುರಗಿಯಲ್ಲಿ ಟ್ಯೂಷನ್ ಹೇಳಿಕೊಡುತ್ತಾ, ಜೀವನ ನಡೆಸುತ್ತಿದ್ದ. ಈತನ ಕುಟುಂಬದ ಆರ್ಥಿಕ ಪರಿಸ್ಥಿತಿ ನೋಡಿದ್ರೆ, 30 ರಿಂದ 40 ಲಕ್ಷ ರೂ. ಕೊಡುವ ಸ್ಥಿತಿಯಲ್ಲಿಯೂ ಇಲ್ಲ. ಆದರೂ ಅಕ್ರಮವಾಗಿ ಪಿಎಸ್ಐಗೆ ಸೆಲೆಕ್ಟ್ ಆಗಿದ್ದು, ಹೇಗೆ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ : ವಿಚಾರಣೆಗೆ ಕರೆದಿದ್ದ 50 ಅಭ್ಯರ್ಥಿಗಳ ಪೈಕಿ 45 ಮಂದಿ ಹಾಜರು!
ಬಿಜೆಪಿ ಕಾರ್ಯಕರ್ತ ಎನ್ನುವ ಕಾರಣಕ್ಕೆ ಈತನಿಗೆ ಉಚಿತವಾಗಿ ಪಾಸ್ ಮಾಡಿಸಿದ್ರಾ ಅಕ್ರಮದ ರುವಾರಿಗಳು? ಅನ್ನೋ ಅನುಮಾನ ಕೂಡ ಇದೆ. ಯಾಕಂದ್ರೆ, ಸಿಐಡಿ ವಿಚಾರಣೆಯಲ್ಲಿ ಈತ ಹಣ ಕೊಟ್ಟ ಮಾಹಿತಿ ಸಿಗುತ್ತಿಲ್ಲ. PSI ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಕೆಲ ಸಂಘಟನೆಗಳಿಗಾಗಿಯೇ ಖೋಟಾ ಫಿಕ್ಸ್ ಮಾಡಿಕೊಂಡಿದ್ರಾ? ಹೀಗೆ ಹತ್ತಾರು ಪ್ರಶ್ನೆಗಳು ಸಿಐಡಿಗೆ ತಲೆ ನೋವಾಗಿ ಕಾಡುತ್ತಿವೆ.
ಈ ಮಧ್ಯೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಐಡಿ ತಂಡ, ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ 50 ಅಭ್ಯರ್ಥಿಗಳಿಗೆ ನೋಟಿಸ್ ನೀಡಿ ಬುಧವಾರ ವಿಚಾರಣೆ ನಡೆಸಿದೆ. 50ರಲ್ಲಿ 45 ಅಭ್ಯರ್ಥಿಗಳು ಮಾತ್ರ ವಿಚಾರಣೆಗೆ ಹಾಜರಾಗಿದ್ದು, ಉಳಿದವರು ಗೈರಾಗಲು ಕಾರಣ ಏನು ಅನ್ನೋದು ಪತ್ತೆ ಮಾಡುತ್ತಿದ್ದಾರೆ.