ಕಲಬುರಗಿ : ಪೊಲೀಸ್ ಫೀಡ್ ಬ್ಯಾಕ್ ಆ್ಯಪ್ ಜಾರಿಗೆ ತಂದ ಬಳಿಕ ಇದೀಗ ಕಲಬುರಗಿ ಕನೆಕ್ಟ್ ಎಂಬ ಹೊಸ ಆ್ಯಪ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಉದ್ಘಾಟಿಸಿದರು. ಅಧಿಕಾರಿಗಳಿಗೆ ಕರ್ತವ್ಯಲೋಪದ ವಿರುದ್ಧ ಬಿಸಿ ಮುಟ್ಟಿಸುವುದರ ಜೊತೆಗೆ ಜನರ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವುದು ಈ ಆ್ಯಪ್‌ನ ಉದ್ದೇಶ.
ಕಲಬುರಗಿ ಕನೆಕ್ಟ್ ಹೇಗೆ ಕೆಲಸ ಮಾಡುತ್ತೆ: ಇದು ರಾಜ್ಯದಲ್ಲೇ ಮೊಟ್ಟ ಮೊದಲ ಪ್ರಯೋಗ. ಕ್ಯೂ ಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಸಮಸ್ಯೆ ಮತ್ತು ದೂರು ಅಪ್ಲೋಡ್ ಮಾಡಿದರೆ ಸಾಕು. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಅರ್ಜಿ ಸಲ್ಲಿಕೆ ಆಗುತ್ತದೆ. ಉಸ್ತುವಾರಿ ಸಚಿವರ ಕಚೇರಿಯಲ್ಲಿ ಅರ್ಜಿ ಪರಿಶೀಲನೆಯ ಬಳಿಕ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಅರ್ಜಿ ರವಾನೆ ಮಾಡಿ, ಸಮಸ್ಯೆಗೆ ಶೀಘ್ರವೇ ಪರಿಹಾರ ಪಡೆಯಬಹುದು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ''ಸಾರ್ವಜನಿಕರು ಸಲ್ಲಿಸಿದ ಅರ್ಜಿಯ ವಸ್ತುಸ್ಥಿತಿ ಅರಿಯಲು ಅರ್ಜಿಯ ಸಂಖ್ಯೆಯನ್ನು ವೆಬ್ಸೈಟ್ನಲ್ಲಿ ದಾಖಲಿಸಿದರೆ, ವಿವರ ಲಭ್ಯವಾಗಲಿದೆ. ಜನರ ಸಮಸ್ಯೆ, ದೂರು ಅರ್ಜಿಗಳ ಪರಿಶೀಲನೆ ಮತ್ತು ಪರಿಹಾರಕ್ಕಾಗಿ ಜಿಲ್ಲೆಯ 72 ಇಲಾಖೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಆ್ಯಪ್‌ನ ಲಾಭ ಪಡೆಯಬೇಕು'' ಎಂದರು.
ಜನಸ್ನೇಹಿ ಪೊಲೀಸ್ ಕ್ಯೂಆರ್ ಕೋಡ್ ಬಿಡುಗಡೆ : ಇನ್ನೊಂದೆಡೆ, ಪೊಲೀಸ್ ಠಾಣೆಯಲ್ಲಿ ನೊಂದವರಿಗೆ ಸರಿಯಾಗಿ ಸ್ಪಂದನೆ ಸಿಗೋದಿಲ್ಲ. ಪೊಲೀಸರು ಸರಿಯಾದ ರೀತಿ ಸ್ಪಂದಿಸುತ್ತಿಲ್ಲ, ದೂರು ಸ್ವೀಕರಿಸುತ್ತಿಲ್ಲ, ದೂರು ಸ್ವೀಕರಿಸಲು ವಿಳಂಬ ಮಾಡ್ತಾರೆ ಅಥವಾ ದೂರು ನೀಡಲು ಹೋದಾಗ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹಾಕ್ತಾರೆ. ಈ ರೀತಿಯ ಆರೋಪಗಳು ಆಗಾಗ್ಗೆ ಕೇಳಿ ಬರುತ್ತವೆ. ಇದರ ಪರಿಣಾಮವಾಗಿ ಪೊಲೀಸ್ ಠಾಣೆಗೆ ಹೋಗಲು ಇಂದಿಗೂ ಅನೇಕ ಮಂದಿ ಹಿಂಜರಿಯುತ್ತಾರೆ. ಇಂತಹ ಹಲವು ಸಮಸ್ಯೆಗಳಿಗೆ ಆಸ್ಪದ ನೀಡದಂತೆ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಿದೆ. ಪೊಲೀಸ್ ಫೀಡ್ ಬ್ಯಾಕ್ ಆ್ಯಪ್ ಕ್ಯೂಆರ್ ಕೋಡ್ ತಂತ್ರಾಂಶ ಜಾರಿಗೆ ತರುವ ಮೂಲಕ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಲಾಗುತ್ತಿದೆ.
ಸಚಿವರಿಂದ ಕ್ಯೂಆರ್ ಕೋಡ್ ಬಿಡುಗಡೆ: ಕಲಬುರಗಿ ನಗರದ ಪೊಲೀಸ್ ಭವನದಲ್ಲಿ ಜನಸ್ನೇಹಿ ಅಭಿಯಾನ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಸ್ಪಂದಿಸುವ ಕುರಿತು ಸಾರ್ವಜನಿಕರೇ ಮುಕ್ತವಾಗಿ ಪ್ರತಿಕ್ರಿಯಿಸುವ 'ಪೊಲೀಸ್ ಫೀಡ್ ಬ್ಯಾಕ್ ಆ್ಯಪ್' ಕ್ಯೂಆರ್ ಕೋಡ್ ಲೋಕಾರ್ಪಣೆ (ಆಗಸ್ಟ್ 14-2023) ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೂತನ ತಂತ್ರಾಂಶದ ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ್ದರು.
''ಸಮಸ್ಯೆಗಳ ಪರಿಹಾರಕ್ಕಾಗಿ, ನ್ಯಾಯಕ್ಕಾಗಿ ದೂರು ಸಲ್ಲಿಸಲು ಹಾಗೂ ವ್ಯಾಜ್ಯ ಪರಿಹಾರಕ್ಕಾಗಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರ ಜೊತೆಗೆ ಜನಸ್ನೇಹಿಯಾಗಿ ವರ್ತಿಸುವುದು ಪೊಲೀಸರ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡುವ ಉದ್ದೇಶದಿಂದ ಜನಸ್ನೇಹಿ ಪೊಲೀಸ್ ಅಭಿಯಾನ ಆರಂಭಿಸಲಾಗಿದೆ'' ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು.
ಇದನ್ನೂ ಓದಿ: Police feedback app: ಪೊಲೀಸ್ ಫೀಡ್ ಬ್ಯಾಕ್ ಆ್ಯಪ್.. ಜನಸ್ನೇಹಿ ಪೊಲೀಸ್ ಕ್ಯೂಆರ್ ಕೋಡ್ ಬಿಡುಗಡೆ