ಕಲಬುರಗಿ: ನಾಳೆ ನಡೆಯಲಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತಎಣಿಕೆ ಕಾರ್ಯಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯದ ಸುತ್ತಲೂ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಎನ್.ವಿ. ಪ್ರಸಾದ್ ತಿಳಿಸಿದರು. ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಅವರು ಚುನಾವಣಾ ಸಿಬ್ಬಂದಿಯ ಜೊತೆ ಚರ್ಚಿಸಿ ಯಾವುದೇ ಲೋಪದೋಷಗಳಾಗದಂತೆ ಕ್ರಮ ವಹಿಸುವಂತೆ ಸೂಚಿಸಿದರು.
ಐವರು ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರ:
ಕಾಂಗ್ರೆಸ್ನ ಶರಣಪ್ಪ ಮಟ್ಟೂರ, ಬಿಜೆಪಿಯ ಶಶೀಲ್ ನಮೋಶಿ, ಜೆಡಿಎಸ್ನ ತಿಮ್ಮಯ್ಯ ಪುರ್ಲೆ, ವಾಟಾಳ್ ನಾಗರಾಜ್, ಚಂದ್ರಕಾಂತ್ ಸಿಂಗೆ ಅಖಾಡದಲ್ಲಿದ್ದು, ಎಲ್ಲರ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಚುನಾವಣಾ ಆಯೋಗ ನಿರ್ದೇಶನದಂತೆ ಮತ ಎಣಿಕೆ ನಡೆಯಲಿದೆ.
ಸೂಪರ್ವೈಜರ್ ಸೇರಿ 120 ಸಿಬ್ಬಂದಿ ನಿಯೋಜನೆ:
ಚುನಾವಣೆ ಆಯೋಗದ ಸೂಚನೆಯಂತೆ ಏಳು ಟೇಬಲ್ ಅಳವಡಿಸಲಾಗಿದೆ. ಪ್ರತಿ ಟೇಬಲ್ಗೆ ಸೂಪರ್ವೈಜರ್ ಸೇರಿ ಐದು ಜನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನೊಳಗೊಂಡಿರೋ ಕ್ಷೇತ್ರ ಇದಾಗಿದ್ದು, 147 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಕ್ಷೇತ್ರದಲ್ಲಿ ಶೇ.73.32 ರಷ್ಟು ಮತದಾನವಾಗಿದ್ದು, 21437 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
144 ನಿಷೇಧಾಜ್ಞೆ ಜಾರಿ:
ಚುನಾವಣಾ ಫಲಿತಾಂಶ ನಾಳೆ ಹೊರ ಬೀಳಲಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯ ಸುತ್ತಲೂ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವಿವಿ ಜೋತ್ಸ್ನಾ ಆದೇಶ ಹೊರಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 100 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.