ಕಲಬುರಗಿ: ಬಿಸಿಲೂರಿನಲ್ಲಿ ತೊಗರಿ ಬೆಳೆಗಾರರು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಸೂಕ್ತ ಬೆಂಬಲ ಬೆಲೆಗಾಗಿ ಕಾದು ಕುಳಿತಿದ್ದ ರೈತರಿಗೆ ಸಚಿವ ಉಮೇಶ್ ಕತ್ತಿ ಕೊಟ್ಟಿರುವ ಹೇಳಿಕೆ ರೈತರಿಗೆ ಖುಷಿ ತಂದರೆ, ಮತ್ತೊಂದೆಡೆ ಪೇಚಿಗೆ ಸಿಲುಕುವಂತೆ ಮಾಡಿದೆ.
ಹೌದು, ಬಿಸಿಲೂರು ಕಲಬುರಗಿಯ ತೊಗರಿ ಬೆಳೆಗಾರರು ಪ್ರತಿ ವರ್ಷವೂ ಒಂದಿಲ್ಲ ಒಂದು ರೀತಿಯ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಈ ಸಲ ಭಾರಿ ಪ್ರವಾಹದಿಂದ ಭಾಗಶಃ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ರೈತರು ಇದೀಗ ತೊಗರಿ ಬೆಂಬಲೆ ಬೆಲೆಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ 6 ಸಾವಿರ ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಿದೆ. ಪ್ರವಾಹ, ಕೊರೊನಾದಿಂದ ಸಂಕಷ್ಟ ಎದುರಿಸಿರುವ ಅನ್ನದಾತರು ಕ್ವಿಂಟಲ್ ತೊಗರಿಗೆ 8 ಸಾವಿರ ಬೆಂಬಲ ಬೆಲೆ ನಿಗದಿ ಮಾಡುವಂತೆ ಹೋರಾಟ ಮಾಡುತ್ತಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಕೆಲ ರೈತರು ಅನಿವಾರ್ಯವಾಗಿ ಮಾರುಕಟ್ಟೆಯಲ್ಲಿ 5-6 ಸಾವಿರ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಜನವರಿ 26 ರ ಗಣರಾಜ್ಯೋತ್ಸವ ದಿನದಂದು ನಗರಕ್ಕೆ ಆಗಮಿಸಿದ್ದ ಆಹಾರ ಸಚಿವ ಉಮೇಶ್ ಕತ್ತಿ, ತೊಗರಿಗೆ 8 ಸಾವಿರ ವರೆಗೂ ಬೆಂಬಲ ಬೆಲೆ ಆಗುತ್ತದೆ ಎಂದು ಮಾದ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದರಿಂದ ರೈತರು ತೊಗರಿ ಮಾರಾಟ ಮಾಡಬೇಕು ಅಥವಾ, ಕಾಯಬೇಕ ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ.
6 ಸಾವಿರ ಬೆಂಬಲ ನಿಗಧಿ ಮಾಡಿರುವ ಸರ್ಕಾರ ಇನ್ನೂವರೆಗೆ ತೊಗರಿ ಖರೀದಿಯನ್ನ ಜಿಲ್ಲೆಯಲ್ಲಿ ಆರಂಭಿಸಿಲ್ಲ. ಕೇವಲ ನೋಂದಣಿ ಕಾರ್ಯ ನಡೆಯುತ್ತಿದೆ. ಸಾಲ ಸೂಲ ಮಾಡಿಕೊಂಡು ತೊಗರಿ ಬೆಳೆದಿರುವ ರೈತರು ಸೂಕ್ತ ಬೆಂಬಲ ಬೆಲೆಗಾಗಿ ಎದುರು ನೋಡುತ್ತಿದ್ದಾರೆ. ಸಾಲಗಾರರ ಕಿರುಕುಳ ತಾಳದೆ ಕೆಲ ರೈತರು ಮಾರುಕಟ್ಟೆ ಬೆಲೆ 5 -6 ಸಾವಿರಕ್ಕೆ ತೊಗರಿ ಗುಣಮಟ್ಟದ ಆಧಾರದ ಮೇಲೆ ತೊಗರಿ ಮಾರಾಟ ಮಾಡುತ್ತಿದ್ದಾರೆ. ಬಹಳಷ್ಟು ರೈತರು ಸಚಿವರ ಹೇಳಿಕೆಯಿಂದ 8 ಸಾವಿರ ಬೆಂಬಲ ಬೆಲೆ ಸೀಗಬಹುದು ಅಂತಾ ತೊಗರಿ ಮಾರಾಟ ಮಾಡದೆ ಕಾಯುತ್ತಿದ್ದಾರೆ. ಆದರೆ ಯಾವಾಗ ಅಧಿಕೃತವಾಗಿ 8 ಸಾವಿರ ಬೆಂಬಲ ಬೆಲೆ ಸರ್ಕಾರ ಘೋಷಣೆ ಮಾಡುತ್ತೆ ಅಂತಾ ತಿಳಿಯದೇ ಅನ್ನದಾತರು ಗೊಂದಲದಲ್ಲೇ ದಿನ ಕಳೆಯುತ್ತಿದ್ದಾರೆ. ಅಲ್ಲದೆ ಬಹಳಷ್ಟು ದಿನ ತೊಗರಿ ಇಟ್ಟುಕೊಂಡ್ರೆ ತೊಗರಿಯ ತೆವಾಂಶ ಕಡಿಮೆಯಾಗಿ ತೂಕ ಕಡಿಮೆಯಾಗುವ ಆತಂಕ ಕೂಡ ರೈತರನ್ನ ಕಾಡಲಾರಂಭಿಸಿದೆ.
ಓದಿ : ಇಲಕಲ್ಲನಲ್ಲಿ ಹೊತ್ತಿ ಉರಿದ ಶಾಪಿಂಗ್ ಕಾಂಪ್ಲೆಕ್ಸ್: ಕೋಟ್ಯಂತರ ರೂಪಾಯಿ ನಷ್ಟ
ಒಟ್ಟಿನಲ್ಲಿ ನೆರೆಯಿಂದ ಭಾಗಶಃ ಬೆಳೆ ಕಳೆದುಕೊಂಡು ರೈತರು ನಷ್ಟ ಅನುಭವಿಸಿದ್ದಾರೆ. ಅಳಿದುಳಿದ ತೊಗರಿಗೆ ಸೂಕ್ತ ಬೆಂಬಲ ಬೆಲೆ ಸೀಗದೆ ಅನ್ನದಾತರು ಪರದಾಡುವಂತಾಗಿದೆ. ಸಚಿವರು ಹೇಳಿರುವಂತೆ ಶೀಘ್ರದಲ್ಲಿ 8 ಸಾವಿರ ಬೆಂಬಲ ಬೆಲೆ ಫಿಕ್ಸ್ ಮಾಡಿ ಸರ್ಕಾರ ತೊಗರಿ ಖರೀದಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ.