ಕಲಬುರಗಿ : ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರ ರಾಮತೀರ್ಥ ಕುಂಡ ನಿರ್ಲಕ್ಷ್ಯಕ್ಕೊಳಗಾಗಿದ್ದು ಅಳಿವಿನಂಚಿಗೆ ಬಂದು ತಲುಪಿದೆ. ಈ ಸಂಬಂಧ ರಾಮತೀರ್ಥ ಕುಂಡಕ್ಕೆ ಕಾಯಕಲ್ಪ ಕಲ್ಲಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರಗಿಯಿಂದ ಸುಮಾರು 81 ಕಿ.ಮೀ ದೂರದಲ್ಲಿರುವ ಯಡ್ರಾಮಿ ಪಟ್ಟಣದ ರಾಮ ತೀರ್ಥ ಕುಂಡ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ಗ್ರಾಮದ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ರಾಮ ತೀರ್ಥ ಕುಂಡ ಒಂದು ಐತಿಹಾಸಿಕ ತಾಣವು ಹೌದು.
ವನವಾಸದ ಸಂದರ್ಭ ಭೇಟಿ ನೀಡಿದ್ದ ಪ್ರಭು ಶ್ರೀರಾಮಚಂದ್ರ : ಶ್ರೀರಾಮ ವನವಾಸಕ್ಕೆ ತೆರಳುವ ವೇಳೆ ಇಲ್ಲಿಗೆ ಬಂದು ತೀರ್ಥ ಕುಂಡದಲ್ಲಿ ಸ್ನಾನ ಮಾಡಿ ವನವಾಸಕ್ಕೆ ತೆರಳಿದ್ದನು ಎಂದು ಹೇಳಲಾಗುತ್ತದೆ. ಹೀಗಾಗಿ ಈ ಸ್ಥಳಕ್ಕೆ ರಾಮತೀರ್ಥ ಎಂದು ಕರೆಯಲಾಗುತ್ತದೆ. ಯಡ್ರಾಮಿ ಪಟ್ಟಣದ ಇನ್ನೊಂದು ಸ್ಥಳದಲ್ಲಿ ರಾಮಲಿಂಗ ದೇವಸ್ಥಾನವಿದ್ದು, ಇಲ್ಲಿ ರಾಮನು ಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದ್ದನು. ಇದರಿಂದಾಗಿಯೇ ಈ ದೇವಾಲಯಕ್ಕೆ ರಾಮಲಿಂಗ ದೇವಸ್ಥಾನ ಎಂಬ ಹೆಸರು ಬಂತೆಂದು ಹೇಳುತ್ತಿರುವುದು ಐತಿಹ್ಯ. ಎಂತಹ ಬಿಸಿಲು, ಬರಗಾಲ ಬಂದರೂ ರಾಮಕುಂಡದಲ್ಲಿರುವ ನೀರು ಬತ್ತುವುದಿಲ್ಲ. ರಾಮಕುಂಡ ಕ್ಷೇತ್ರದ ಕಂಬಗಳು ಪರ್ಷಿಯನ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದ್ದು, ನೋಡಲು ಅತ್ಯಾಕರ್ಷಕವಾಗಿದೆ.
ಅಳಿವಿನಂಚಿನಲ್ಲಿರುವ ರಾಮತೀರ್ಥ ಕುಂಡ : ಸದ್ಯ ಯಡ್ರಾಮಿ ರಾಮತೀರ್ಥ ಕುಂಡ ನಿರ್ಲಕ್ಷ್ಯಕ್ಕೊಳಗಾಗಿ ಪಾಳು ಕೊಂಪೆಯಾಗಿ ಬದಲಾಗಿದೆ. ಮುಳ್ಳು ಗಿಡಗಂಟಿಗಳು ಬೆಳೆದು, ಗೋಡೆಗಳು ಶಿಥಿಲಗೊಂಡು ಧರೆಗುರುಳುವ ಹಂತಕ್ಕೆ ಬಂದು ತಲುಪಿದೆ. ಸಂಬಂಧಪಟ್ಟ ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವಾಸಿ ತಾಣ ಮಾಡುವಂತೆ ಒತ್ತಾಯ : ರಾಮತೀರ್ಥ ಕುಂಡವು ಪ್ರಮುಖ ಪ್ರವಾಸಿ ತಾಣ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಪ್ರವಾಸೋದ್ಯಮ ಇಲಾಖೆಯವರು ಇತ್ತ ಕಡೆ ಗಮನ ಹರಿಸಿ ಕ್ಷೇತ್ರ ಅಭಿವೃದ್ಧಿಗೆ ಮುಂದಾದರೆ ಒಂದು ಧಾರ್ಮಿಕ ತಾಣ ಮಾತ್ರವಲ್ಲದೆ ಪ್ರವಾಸಿ ತಾಣವನ್ನಾಗಿಯೂ ಮಾಡಬಹುದು. ಪುರಾತನ ಕಾಲದ ರಾಮತೀರ್ಥ ಕುಂಡದ ಸಂರಕ್ಷಣೆ ಜೊತೆಗೆ, ಇಲ್ಲಿನ ಸುತ್ತಮುತ್ತಲಿನ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ನೀಡಿದ್ದ ಯಡ್ರಾಮಿ ಕ್ಷೇತ್ರಕ್ಕೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಧರ್ಮಸಿಂಗ್ ತಮ್ಮ ಜೀವಿತಾವಧಿಯಲ್ಲಿ ಯಡ್ರಾಮಿಯನ್ನು ಕರ್ನಾಟಕದ ಮಾದರಿ ತಾಲೂಕನ್ನಾಗಿ ಮಾಡುವ ಕನಸು ಕಂಡಿದ್ದರು. ಆದರೆ ಕನಸು ಕನಸಾಗಿಯೇ ಉಳಿದಿದೆ.
ಇದನ್ನೂ ಓದಿ : ಹುಣಸೂರಿನಲ್ಲಿದೆ 250 ವರ್ಷಗಳ ಹಿಂದಿನ ಬ್ರಿಟಿಷರ ಗೋರಿಗಳು.. ಇಂದಿಗೂ ಪ್ರಚಾರಕ್ಕೆ ಬಾರದೇ ಸ್ಮಶಾನದಲ್ಲಿಯೇ ಮೌನ!