ಕಲಬುರಗಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸೇತುವೆ ಇಲ್ಲದ ಕಾರಣ ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟಬೇಕಾದ ದುಸ್ಥಿತಿ ಜಿಲ್ಲೆಯ ಯಡ್ರಾಮಿ ತಾಲೂಕಿನ ತೆಲಗಬಾಳ ಗ್ರಾಮಸ್ಥರದ್ದಾಗಿದೆ.
ಎದೆಮಟ್ಟದ ನೀರಿನಲ್ಲಿ ಜನರು ಚಕ್ಕಡಿಯಲ್ಲಿ ಹಳ್ಳ ದಾಟುತ್ತಿದ್ದಾರೆ. ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಹಳ್ಳದಲ್ಲಿ ನಡೆಯುತ್ತ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ವಿಪರೀತ ಮಳೆ ಹಿನ್ನೆಲೆ ಹೊಲಗಳಿಗೆ ತೆರಳಬೇಕಾದ ರೈತರು ಹಾಗೂ ಗ್ರಾಮಸ್ಥರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಹಳ್ಳದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ವಲ ಮಳೆ ಬಂದ್ರೆ ಸಾಕು, ತೆಲಗಬಾಳದಿಂದ ಕಡಕೋಳಕ್ಕೆ ತೆರಳಬೇಕಾದರೆ ತುಂಬಿ ಹರಿಯುವ ಹಳ್ಳ ದಾಟಲು ಜನ ಪರದಾಟ ನಡೆಸಬೇಕಾಗುತ್ತದೆ. ಬೇರೆ ದಾರಿಯಿಲ್ಲದೆ ನೀರಿನಲ್ಲಿ ಗ್ರಾಮಸ್ಥರು ನಿತ್ಯ ಸಂಚರಿಸುತ್ತಿದ್ದಾರೆ.
ಸ್ವಲ್ಪ ಯಾಮಾರಿದರೂ ಈ ಹಳ್ಳದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ನಿತ್ಯವೂ ಹಳ್ಳದ ನೀರಿನ ಹರಿವು ಹೆಚ್ಚುತ್ತಿದೆ. ಆದರೂ ಕಿಲೋಮೀಟರ್ ದೂರದಷ್ಟೂ ಇಲ್ಲಿನ ಜನ ನೀರಿನಲ್ಲಿಯೇ ನಡೆದುಕೊಂಡು ಹೋಗಬೇಕು. ಜನ ಇಂತಹ ಅಪಾಯಕ್ಕೆ ಸಿಲುಕಿದ್ರು ತಾಲೂಕಿನ ಜನಪ್ರತಿನಿಧಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ತೆಗಲಬಾಳ ಹಾಗೂ ಕಡಕೋಳ ಮಧ್ಯೆ ಸೇತುವೆ ನಿರ್ಮಿಸುವಂತೆ ಜನ ಒತ್ತಾಯಿಸಿದ್ದಾರೆ.