ಕಲಬುರಗಿ : ಶಿವಲಿಂಗಮ್ಮ ಎಂಬ ಮಹಿಳೆ ಕಳೆದ ಒಂದು ವರ್ಷದಿಂದ ಅನುಕಂಪದ ನೌಕರಿಗಾಗಿ ಕಚೇರಿಗಳಿಗೆ ಅಲೆಯುತ್ತಿದ್ದರು. ಆದ್ರೆ, ಜಿಲ್ಲೆಯ ಜಿಲ್ಲಾಧಿಕಾರಿ ಅವರಿಗೆ ಎರಡೇ ದಿನದಲ್ಲಿ ನೌಕರಿ ಸಿಗುವಂತೆ ಮಾಡಿದ್ದಾರೆ.
ಜ.25ರಂದು ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಕೊಂಡ ಯಶ್ವಂತ ಗುರುಕರ್ ಅವರನ್ನು ಭೇಟಿಯಾಗಲು ಶಿವಲಿಂಗಮ್ಮ ತನ್ನ ಇಬ್ಬರು ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಹೊರಗಡೆ ಕುಳಿತಿದ್ದರು.
ಅಧಿಕಾರ ವಹಿಸಿಕೊಂಡು ಡಿಸಿ ಗುರುಕರ್ ಹೊರ ಹೋಗುತ್ತಿದ್ದಾಗ, ಮಹಿಳೆ ಕುಳಿತಿದ್ದನ್ನ ಕಂಡು ಶಿವಲಿಂಗಮ್ಮಳ ಬಳಿಗೆ ತೆರಳಿ ಏನು ಸಮಸ್ಯೆ, ಯಾಕೆ ಇಲ್ಲಿಗೆ ಬಂದಿದ್ದೀರಿ ಅಂತಾ ಕೇಳಿದ್ದಾರೆ.
ಮಹಿಳೆಯ ಅಹವಾಲು ಆಲಿಸಿದ ಡಿಸಿ ಸ್ಥಳದಲ್ಲಿಯೇ ಎರಡು ದಿನದಲ್ಲಿ ನಿಮಗೆ ನೌಕರಿ ಸಿಗುತ್ತೆ, ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿ ಸಸ್ಪೆಂಡ್ ಆಗ್ತಾರೆ ಎಂದು ಭರವಸೆ ನೀಡಿದ್ದರು. ಅದರಂತೆ ಕೇವಲ ಎರಡೇ ದಿನದಲ್ಲಿ ಶಿವಲಿಂಗಮ್ಮ ಅವರಿಗೆ ಅನುಕಂಪದ ನೌಕರಿ ಸಿಕ್ಕಿದೆ.
ಇದನ್ನೂ ಓದಿ: ಲಂಚ ಪಡೆದು ಜೈಲಲ್ಲಿ ಶಶಿಕಲಾಗೆ ರಾಜಾತಿಥ್ಯ ಆರೋಪ : ಬಂದೀಖಾನೆ ಉಪನಿರ್ದೇಶಕಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ
ಕಲಬುರಗಿ ತಾಲೂಕಿನ ಕುಸನೂರ ನಿವಾಸಿಯಾದ ಶಿವಲಿಂಗಮ್ಮಳ ಗಂಡ ಮಾಳಿಂಗರಾಯ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ನಾಡ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯದಲ್ಲಿದ್ದಾಗ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದರು.
ಹೀಗಾಗಿ, ಅನುಕಂಪ ಆಧಾರದ ಉದ್ಯೋಗಕ್ಕಾಗಿ ಶಿವಲಿಂಗಮ್ಮ ಅರ್ಜಿ ಸಲ್ಲಿಸಿ ಕಚೇರಿಗಳಿಗೆ ಅಲೆಯುತ್ತಿದ್ದರು. ಇದೀಗ ಕೆಲಸ ಸಿಕ್ಕಿದ್ದು, ಮಹಿಳೆ ಕೋರಿದ ಕಲಬುರಗಿ ತಹಶೀಲ್ದಾರ್ ಕಚೇರಿಯಲ್ಲಿ ಖಾಲಿಯಿದ್ದ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ನೇಮಕಾತಿಯ ಆದೇಶ ಪತ್ರವನ್ನು ಜಿಲ್ಲಾಧಿಕಾರಿ ಯಶ್ವಂತ ಗುರುಕರ್ ಮಹಿಳೆಗೆ ನೀಡಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ